Advertisement

ಇಂದ್ರಾಣಿಯಷ್ಟೇ ಅಲ್ಲ; ಮಲ್ಪೆ ಅಂತರ್ಜಲವೂ ಕಲುಷಿತ

09:45 PM Feb 24, 2022 | Team Udayavani |

ಉಡುಪಿ ನಗರದ ಒಳಚರಂಡಿಯ ಅವ್ಯವಸ್ಥೆಯಿಂದ ಇಡೀ ಇಂದ್ರಾಣಿ ನದಿ ಕಲುಷಿತಗೊಂಡು ಸುತ್ತಲಿನ ಪರಿಸರದ ಜನರಿಗೆ ಸಂಕಷ್ಟ ತಂದೊಡ್ಡಿದ್ದನ್ನು ಹಿಂದೆ “ಮರೆತೇ ಹೋದ ಇಂದ್ರಾಣಿ ಕಥೆಯ’ ಸರಣಿಯಲ್ಲಿ ಸವಿವರವಾಗಿ ಹೇಳಲಾಗಿತ್ತು. ಬಳಿಕ ನಗರಸಭೆ ಕೆಲವು ಪರಿಹಾರ ಕ್ರಮಗಳನ್ನು ಕೈಗೊಂಡರೂ ಇಂದ್ರಾಣಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಈಗ ಮಲ್ಪೆಯ ಸುತ್ತಲಿನ ಪ್ರದೇಶಗಳ ಸಮಸ್ಯೆಯೂ ಹೆಚ್ಚಾಗತೊಡಗಿದೆ. ಹಿನ್ನೆಲೆಯಲ್ಲಿ ಇಂದ್ರಾಣಿ ಶುದ್ಧಗೊಂಡು ಸುತ್ತಲೂ ಆರೋಗ್ಯಕರ ಪರಿಸರ ನಿರ್ಮಾಣವಾಗಲು ಉಡುಪಿ, ಮಣಿಪಾಲ, ಮಲ್ಪೆ ಪ್ರದೇಶಕ್ಕೆ ಒಳಚರಂಡಿ ಕಲ್ಪಿಸುವುದೊಂದೇ ಪರಿಹಾರವೆಂಬ ಸರಣಿಯ ಮೊದಲ ಭಾಗವಿದು.

Advertisement

ಉಡುಪಿ:  ನಗರದ ಒಳಚರಂಡಿಯ ಅವ್ಯವಸ್ಥೆ ಇನ್ನೂ ಸರಿ ಹೋಗದ ಪರಿಣಾಮವೀಗ ಮಲ್ಪೆ ಜನರ ಬದುಕನ್ನೂ ಸಂಕಷ್ಟಕ್ಕೆ ಸಿಲುಕಿಸತೊಡಗಿದೆ. ಇದರೊಂದಿಗೆ ಮಲ್ಪೆಯಲ್ಲೂ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಭವಿಷ್ಯದಲ್ಲಿ ಪಟ್ಟಣ ವಾಸಿಗಳ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡುವ ಭೀತಿ ಎದುರಾಗಿದೆ.

ಒಟ್ಟಿನಲ್ಲಿ ಉಡುಪಿ ನಗರದ ಒಳಚರಂಡಿ ಅವ್ಯವಸ್ಥೆ ಮತ್ತು ಮಲ್ಪೆ ಪ್ರದೇಶದ ಒಳಚರಂಡಿ ಕೊರತೆ ನಾಗರಿಕರ ಬದುಕನ್ನು ಹೈರಾಣಾಗಿಸುತ್ತಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟುಂಬಕ್ಕೆ ಉದ್ಯೋಗ ಕಲ್ಪಿಸಿರುವ ಮಲ್ಪೆಯಲ್ಲಿ ಪ್ರಸ್ತುತ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲ. ಹಾಗಾಗಿ ಮನೆ, ವಾಣಿಜ್ಯ ಕಟ್ಟಡ, ಕಾರ್ಖಾನೆಗಳ ಕಲುಷಿತ ನೀರು ನದಿ ಮತ್ತು ಸಮುದ್ರ ಸೇರತೊಡಗಿದೆ. ಪ್ರಸ್ತುತ ಉಡುಪಿ ನಗರದ ಕಲುಷಿತ ನೀರು  ಇಂದ್ರಾಣಿ ನದಿ ಮೂಲಕ ಸಮುದ್ರ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಲ್ಪೆ ಸುತ್ತಲಿನ ಪರಸರ ಸಹಿತವಾಗಿ ಇಡೀ ಇಂದ್ರಾಣಿ ನದಿ ಹರಿಯುವ ಭಾಗದಲ್ಲಿ ಅಂತರ್ಜಲ ಕಲುಷಿತವಾಗಿದೆ.

ಇದರೊಂದಿಗೆ ಮಲ್ಪೆಯಲ್ಲೂ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರವಾಗಿಸಿದೆ. ಕಲ್ಮಾಡಿ, ಕೊಡವೂರು, ಕೊಳ, ಮಲ್ಪೆ ಸೆಂಟ್ರಲ್‌, ವಡಭಾಂಡೇಶ್ವರ ವಾರ್ಡ್‌ಗಳಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಪ್ರಸ್ತುತ ಮನೆಗಳು ಸ್ವಂತ ಶೌಚ ಗುಂಡಿಗಳನ್ನು ಹೊಂದಿದ್ದು, ಶೌಚ ಮತ್ತು ಮನೆ ಸ್ನಾನಗೃಹ, ಬಟ್ಟೆ, ಪಾತ್ರೆ ತೊಳೆದ ನೀರು ಈ ಗುಂಡಿಗಳಲ್ಲಿ ಸಂಗ್ರಹವಾಗುತ್ತಿದೆ. ಒಂದಿಷ್ಟು ನದಿ ಸೇರುತ್ತಿದೆ. ಕಲ್ಮಾಡಿ ಸುತ್ತಲಿನ ಭಾಗದಲ್ಲಿ ಸುಮಾರು 140 ಮನೆಗಳಿಗೆ ಶೌಚ ಗುಂಡಿಗಳಿಲ್ಲ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮತ್ತು ಜಾಗದ ಸಮಸ್ಯೆಯಿಂದ ಗುಂಡಿ ನಿರ್ಮಿಸಿ ಕೊಂಡಿಲ್ಲ. ಇವರೆಲ್ಲರ ಬಳಕೆಯ ತ್ಯಾಜ್ಯ ನೀರು ಮಳೆ ನೀರು  ಹರಿಯುವ ತೋಡಿಗೆ ಬಿಡುತ್ತಿದ್ದಾರೆ. ಇದು ಕಲ್ಮಾಡಿ ಹೊಳೆಗೆ (ಇಂದ್ರಾಣಿ ನದಿಗೆ) ಸೇರುತ್ತಿದೆ.

Advertisement

ರಸ್ತೆಗೆ ತ್ಯಾಜ್ಯ ನೀರು: ದೂರು :

ಉಡುಪಿ ನಗರದಿಂದಲೇ ಸಾಕಷ್ಟು ಕಲುಷಿತಗೊಳ್ಳುವ ಇಂದ್ರಾಣಿ ನದಿ ಈ ಭಾಗದಲ್ಲಿ ಮತ್ತಷ್ಟು ಕಲುಷಿತಗೊಂಡು ಸಮುದ್ರ ಸೇರುತ್ತಿದೆ. ಕಲ್ಮಾಡಿ, ಮೂಡು ಬೆಟ್ಟು, ಕೊಡವೂರು ಭಾಗದಲ್ಲಿ ಈ ರೀತಿ ಸಮಸ್ಯೆ ಹೆಚ್ಚಿದೆ.

ಮಲ್ಪೆ ಪೇಟೆಯಲ್ಲಿಯೂ ಹೊಟೇಲ್‌, ಮಾಂಸದಂಗಡಿಗಳ ತ್ಯಾಜ್ಯ ನೀರೆಲ್ಲವೂ ರಸ್ತೆಗೆ ಬಿಡುತ್ತಿರುವ ದೂರೂ ವ್ಯಕ್ತವಾಗಿದೆ. ಇದಲ್ಲದೇ ಮಲ್ಪೆಯಲ್ಲಿ ಕೆಲವರು ಕಟ್ಟಡಗಳನ್ನು ಕಟ್ಟಿಸಿ 40-50 ಜನರಿಗೆ ಬಾಡಿಗೆ ನೀಡಿದ್ದು, ಒಂದು ಕಟ್ಟಡಕ್ಕೆ ಒಂದೇ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ತ್ಯಾಜ್ಯ ನೀರನ್ನೂ ಕೆಲವರು ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಅಂತರ್ಜಲ ಕಲುಷಿತ :

ಕೊಡವೂರು, ಮೂಡುಬೆಟ್ಟು, ಕಲ್ಮಾಡಿ, ಕೊಡಂಕೂರು ಸಹಿತ ಮಲ್ಪೆ ಭಾಗದ ಹಲವೆಡೆ 150ಕ್ಕೂ ಹೆಚ್ಚು ಬಾವಿಗಳು ಕಲುಷಿತಗೊಂಡಿವೆ. ಇಂದ್ರಾಣಿ ನದಿಗೆ ನಗರದ ಒಳಚರಂಡಿ ತ್ಯಾಜ್ಯ ಸೇರುವ ಕಾರಣ ತಾರಗಟ್ಟ, ನಿಟ್ಟೂರು ಬಸ್‌ ನಿಲ್ದಾಣ ಪರಿಸರ, ಅತ್ತಲಾಡಿ, ಚನ್ನಂಗಡಿ, ಕಾನಂಗಿ, ಸಾಯಿಬಾಬಾ ಮಂದಿರ ಪರಿಸರದಲ್ಲಿ ಅಂತರ್ಜಲ ಸಂಪೂರ್ಣವಾಗಿ ಹಾಳಾಗಿದೆ.

ಬೇಸಗೆಯಲ್ಲಿ  ಇರುವುದೇ ಕಷ್ಟ :

ಇಂದ್ರಾಣಿ ನದಿಯಲ್ಲಿನ ಕಲುಷಿತ ನೀರು ಮಳೆಗಾಲದಲ್ಲಿ ಹರಿದು ಸಮುದ್ರ ಸೇರಿದರೆ, ಬೇಸಗೆ ಕಾಲದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆಯಲ್ಲದೇ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಡುತ್ತದೆ. ಇದರಿಂದ ಸುತ್ತಲಿನ ಜನರು ಬದುಕುವುದೇ ಕಷ್ಟವಾಗಿದೆ. ಮನೆ ಬಾಗಿಲು, ಕಿಟಕಿ ತೆಗೆದರೆ ದುರ್ವಾಸನೆ ಮತ್ತು ಸಂಜೆಯ ಹೊತ್ತಿನಲ್ಲಿ ಸೊಳ್ಳೆಗಳ ಕಾಟವನ್ನು ಸಹಿಸಬೇಕಾಗಿದೆ. ಮಲೇರಿಯಾದಂತಹ‌ ಸಾಂಕ್ರಾಮಿಕ ರೋಗದ ಸಮಸ್ಯೆಯ ಭೀತಿಯೂ ಇದೆ. ಈ ಸಮಸ್ಯೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ನಗರಸಭೆ ಸಾಮಾನ್ಯ ಸಭೆಯಲ್ಲೂ ಪ್ರಸ್ತಾವಿಸಿದ್ದಾರೆ. ಆದರೂ ಪರಿಹಾರ ಇನ್ನೂ ಸಾಧ್ಯವಾಗಿಲ್ಲ.

ನಗರದ ತ್ಯಾಜ್ಯವೇ ಸಮಸ್ಯೆಗೆ ಮೂಲ :

ಮಲ್ಪೆ ಭಾಗದಲ್ಲಿ ಅಂತರ್ಜಲ ಹೆಚ್ಚು ಕಲುಷಿತಗೊಳ್ಳಲು ಪ್ರಮುಖ ಕಾರಣ ಉಡುಪಿ ನಗರದಿಂದ ಹೋಗುವ ಕಲುಷಿತ ನೀರು. ಉಡುಪಿ ನಗರವು ಲೆಕ್ಕಕ್ಕಿಂತ ಮೀರಿ ಬೆಳೆದಿದ್ದು, ಈ ಹಿಂದಿನ ಒಳಚರಂಡಿ ವ್ಯವಸ್ಥೆ ಸಮರ್ಥವಾಗಿಲ್ಲ. ನಗರ ಭಾಗದ ಒಳಚರಂಡಿ ನೀರು ಇಂದ್ರಾಣಿ ನದಿ ಮೂಲಕ ಮಲ್ಪೆ ಕಡೆಗೆ ಸಾಗಿ ಸಮುದ್ರ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಲ್ಪೆಗೆ ಒಳಚರಂಡಿ ವ್ಯವಸ್ಥೆ ಶೀಘ್ರವೇ ಜಾರಿಗೊಳ್ಳಬೇಕಿದೆ. ಇಲ್ಲವಾದರೆ ಎರಡೂ ಪಟ್ಟಣಗಳ ಆರ್ಥಿಕ ಅಭಿವೃದ್ಧಿಗೂ ಸಮಸ್ಯೆಯಾಗಲಿದೆ.

 

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next