Advertisement

Malpe: ಮೀನು ಒಣಗಿಸುವ ಜಾಗದ ಪಕ್ಕದಲ್ಲೇ ತ್ಯಾಜ್ಯರಾಶಿ!

03:27 PM Nov 06, 2024 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಹೊರ ಆವರಣದ ಸೇತುವೆ ಬಳಿ ಮೀನು ಒಣಗಿಸುವ ಜಾಗದ ಪಕ್ಕದಲ್ಲೇ ತ್ಯಾಜ್ಯ ರಾಶಿ ಹಾಕುತ್ತಿರುವುದು ಮೀನು ಮಾರಾಟಕ್ಕೆ ದೊಡ್ಡ ಹೊಡೆತವಾಗಿ ಕಾಡಿದೆ. ತ್ಯಾಜ್ಯ ರಾಶಿಯಿಂದಾಗಿ ಒಣಮೀನು ಬೇಡಿಕೆ ಕಳೆದುಕೊಂಡು ಮಾರಾಟವಾಗದೇ ನಷ್ಟ ಉಂಟಾಗುತ್ತಿದೆ ಎಂದು ಮೀನುಗಾರ ಮಹಿಳೆಯರು ಆರೋಪಿಸಿದ್ದಾರೆ.

Advertisement

ಬಂದರಿನ ಹೊರ ಆವರಣದಲ್ಲಿ ಸುಮಾರು 70ಕ್ಕೂ ಅಧಿಕ ಒಣಮೀನು ಮಾರಾಟದ ಶೆಡ್‌ಗಳಿವೆ, ಇವರು ನಿತ್ಯ ಗೋಲಯಿ, ಅಡೆಮೀನು, ಕಲ್ಲರ್‌, ನಂಗ್‌ ಮುಂತಾದ ಮೀನುಗಳನ್ನು ಖರೀದಿಸಿ ಶೆಡ್‌ನ‌ ಬಳಿ ಬಿಸಿಲಿಗೆ ಒಣಗಿಸಲು ಹಾಕುತ್ತಾರೆ. 4-5 ದಿನ ಒಣಗಿದ ಆನಂತರ ಗೋಣಿಚೀಲದಲ್ಲಿ ಪ್ಯಾಕ್‌ ಮಾಡಿ ಚಿಲ್ಲರೆ ಮಾರಾಟಗಾರರಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ಇದರ ಪಕ್ಕದಲ್ಲೇ ಕೆಲವರು ರಾತ್ರಿವೇಳೆ ಕದ್ದು ಮುಚ್ಚಿ ತ್ಯಾಜ್ಯ ರಾಶಿ ತಂದು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ತ್ಯಾಜ್ಯರಾಶಿಯ ಪಕ್ಕ ಇರುವ 10 ಶೆಡ್‌ಗಳ ಮಹಿಳೆಯರಿಗೆ ನೇರ ಹೊಡೆತ ಉಂಟಾಗಿದೆ. ಈ ಭಾಗದಲ್ಲಿ ಒಣಗಿಸಿದ ಮೀನಿಗೆ ಬೇಡಿಕೆ ಇಲ್ಲದೆ ನಷ್ಟ ಉಂಟಾಗುತ್ತಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಕಿನ್ನಿಗೋಳಿ, ಸುರತ್ಕಲ್‌, ಉಡುಪಿ, ಪಡುಬಿದ್ರೆಯಿಂದ ಚಿಲ್ಲರೆ ಮಾರಾಟಗಾರರು ಒಣಮೀನು ಖರೀದಿಸಲು ಇಲ್ಲಿಗೆ ಬರುತ್ತಾರೆ. ಶೆಡ್‌ಬಳಿ ತ್ಯಾಜ್ಯ ರಾಶಿ ಇರುವುದನ್ನು ಕಂಡು ಅವರೆಲ್ಲರೂ ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಹನುಮಾನ್‌ ನಗರದ ಸುಮತಿ ಸಾಲ್ಯಾನ್‌ ಅವರು.

ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ
ಹಲವು ವರ್ಷಗಳಿಂದ ಈ ಜಾಗದಲ್ಲಿ ಕಸ ಎಸೆಯುತ್ತಾರೆ. ದೂರು ನೀಡಿದರೂ, ತೆರವು ಮಾಡಿದರೂ ಕಸ ಎಸೆಯುವುದು ನಿಂತಿಲ್ಲ. ಸಿಸಿ ಕೆಮರಾ ಅಳವಡಿಸಿದರೂ ಹೆಚ್ಚಿನವರು ಹೆಲ್ಮೆಟ್‌ ಹಾಕಿ ಬಂದು ಕಸ ಎಸೆಯುತ್ತಾರೆ. ಹೀಗಾಗಿ ಪತ್ತೆ ಹಚ್ಚುವುದು ಕಷ್ಟವಾಗಿದೆ. ಇಲಾಖೆ ತತ್‌ಕ್ಷಣ ಇಲ್ಲಿ ತ್ಯಾಜ್ಯ ಎಸೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
– ಸುಮಿತ್ರಾ ಕುಂದರ್‌, ಅಧ್ಯಕ್ಷರು, ಮಹಿಳಾ ಮೀನುಗಾರರ ಸಂಘ

ತ್ಯಾಜ್ಯ ತೆರವುಗೊಳಿಸಲು ಕ್ರಮ
ಕಸ ಎಸೆಯುವ ಪ್ರದೇಶಕ್ಕೆ ನೆಟ್‌, ಸಿಸಿ ಕೆಮರಾ ಅವಳಡಿಸಿದರೂ ಜನರು ಕದ್ದು ಮುಚ್ಚಿ ತ್ಯಾಜ್ಯ ಸುರಿಯುತ್ತಿರುವುದು ತ‌ಲೆನೋವಾಗಿ ಪರಿಣಮಿಸಿದೆ. ಸದ್ಯ ಇಲ್ಲಿ ಅಳವಡಿಸಿದ ಸಿಸಿ ಕೆಮರಾ ಕೆಟ್ಟು ಹೋಗಿದ್ದು ದುರಸ್ತಿ ಪಡಿಸಲಾಗುವುದು. ತ್ಯಾಜ್ಯ ರಾಶಿ ತತ್‌ಕ್ಷಣದಲ್ಲಿ ತೆರವು ಗೊಳಿಸುವ ವ್ಯವಸ್ಥೆ ಮಾಡಲಾಗುವುದು, ಮುಂದೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು.
-ಅಂತೋನಿ, ಬಂದರು ಅಧಿಕಾರಿ, ಬಂದರು ಇಲಾಖೆ, ಮಲ್ಪೆ

Advertisement

ಅನಾಗರಿಕ ಪ್ರವೃತ್ತಿಯ ಜನರು
ನಾವು ಬೆಳಗ್ಗೆ 5ರಿಂದ ಸಂಜೆ 7ರವರೆಗೆ ಇಲ್ಲೇ ಇರುತ್ತೇವೆ. ಊಟ, ಚಹಾ ಎಲ್ಲವೂ ಇಲ್ಲೇ. ಇಲ್ಲಿ ಮನೆ, ಅಂಗಡಿಗಳ ತ್ಯಾಜ್ಯಗಳು, ಕೋಳಿ ತ್ಯಾಜ್ಯ, ಸತ್ತ ನಾಯಿ, ಬೆಕ್ಕುಗಳನ್ನು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ನಮ್ಮ ವ್ಯಾಪಾರಕ್ಕಂತೂ ದೊಡ್ಡ ಹೊಡೆತ ಬಿದ್ದಿದೆ ಎನ್ನುತ್ತಾರೆ ಒಣಮೀನು ವ್ಯಾಪಾರಿಗಳಾದ ಪುಷ್ಪ ಬಂಗೇರ, ಶಾಂತ ಕುಂದರ್‌, ಸುಮತಿ ಸಾಲ್ಯಾನ್‌, ಭಾರತಿ ಬಂಗೇರ, ಜಯಂತಿ ಕಾಂಚನ್‌, ಬೇಬಿ ಕಾಂಚನ್‌, ಜಲಜಾ ಅಮೀನ್‌, ರೇಖಾ ಕರ್ಕೇರ.

Advertisement

Udayavani is now on Telegram. Click here to join our channel and stay updated with the latest news.

Next