Advertisement

Malpe ಮೀನುಗಾರಿಕೆ ಬಂದರು: ಸಂಚಾರ ಸ್ತಂಭನ

05:47 PM Jul 29, 2024 | Team Udayavani |

ಮಲ್ಪೆ: ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕಾ ಬಂದರಿನ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ. ಮುಖ್ಯವಾಗಿ ಮಲ್ಪೆಯಲ್ಲಿ ಮೀನುಗಾರರಿಗೆ ತಮ್ಮ ಬೋಟ್‌ಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿಂದಾಗಿ ಹೊಳೆಯಲ್ಲೇ ನಿಲ್ಲಿಸುವ ಅನಿವಾರ್ಯತೆ ಇದೆ.

Advertisement

ಮಲ್ಪೆ ಬಂದರಿನಲ್ಲಿ ವರ್ಷ 365 ದಿನವೂ ಮೀನುಗಾರಿಕಾ ಚಟುವಟಿಕೆ ನಡೆಸಬಹುದು. ಮಂಗಳೂರು – ಕಾರವಾರ ನಡುವೆ ಇರುವ ಈ ಬಂದರಿನಲ್ಲಿ ಸಾವಿರಾರು ಕೋಟಿ ರೂ. ಮೀನುಗಾರಿಕಾ ವ್ಯವಹಾರ ನಡೆಯುತ್ತದೆ. ಬಂದರುಗಳ ವಿಸ್ತರಣೆಯ ಈ ಸಮಸ್ಯೆ ಇಂದು ನಿನ್ನೆಯದಲ್ಲ.

ಪ್ರತೀ ವರ್ಷ ಮೀನುಗಾರರನ್ನು ಕಾಡುತ್ತಿದೆ. ಈ ಭಾರಿ ಬೋಟ್‌ ಒತ್ತಡದ ಸಮಸ್ಯೆ ಮತ್ತಷ್ಟು ಹೆಚ್ಚಿದ್ದು, ಅನ್ಯಮಾರ್ಗ ವಿಲ್ಲದ ಹೆಚ್ಚಿನ ಬೋಟ್‌ ಮಾಲಿಕರು ಬೋಟ್‌ಗಳನ್ನು ಹೊಳೆಯಲ್ಲೇ ಇರಿಸಬೇಕಾಗಿದೆ. ಸಣ್ಣ ದೋಣಿಗಳನ್ನು ಕಡೆಕಾರು, ಕುತ್ಪಾಡಿ, ಉದ್ಯಾವರ ಕನಕೋಡ ಭಾಗದ ಹೊಳೆಯಲ್ಲಿ ಲಂಗರು ಹಾಕಿದ್ದು ಕಂಡು ಬರುತ್ತದೆ

ಹೊಳೆಯಲ್ಲಿ ಅಪಾಯಕಾರಿ

ಹೊಳೆ ಪ್ರದೇಶಗಳಲ್ಲಿ ಬೋಟ್‌ಗಳನ್ನು ಲಂಗರು ಹಾಕುವುದು ಅಪಾಯಕಾರಿ. ನೀರಿನ ಇಳಿತ ಸಮಯ ಬೋಟಿನ ಅಡಿಭಾಗ ನೆಲ ಸ್ಪರ್ಶ ವಾದಾಗ ಬೋಟ್‌ ಅಡ್ಡ ಬೀಳುವ ಪ್ರಮೇಯ ಇರುತ್ತದೆ. ಅಲ್ಲದೆ ಈ ಭಾಗದಲ್ಲಿ ನೀರಿನ ಸೆಳೆತದಿಂದಾಗಿ ಬೋಟಿಗೆ ಕಟ್ಟಲಾದ ಹಗ್ಗ ಕಡಿದು ಹೋದಲ್ಲಿ ಕೊಚ್ಚಿ ಹೋಗುವ ಸಂಭವೂ ಜಾಸ್ತಿಯಾಗಿದೆ.

Advertisement

ಮಲ್ಪೆ ವ್ಯಾಪ್ತಿಯಲ್ಲಿ ಆಳಸಮುದ್ರ, ತ್ರಿಸೆವೆಂಟಿ, ಪಸೀìನ್‌, ಸಣ್ಣಟ್ರಾಲ್‌ಬೋಟು ಸೇರಿದಂತೆ ಸುಮಾರು 3 ಸಾವಿರದಷ್ಟು ಯಾಂತ್ರಿಕ ಬೋಟ್‌ಗಳಿವೆ. ಆದರೆ ಈಗಿರುವ ಬಂದರಿನ 1ಮತ್ತು 2ನೇ ಹಂತದ ಜೆಟ್ಟಿ, ಬಾಪುತೋಟದ ಬಳಿಯ 3ನೇ ಜೆಟ್ಟಿ, ಮಂಜು ದಕ್ಕೆಯ ಬಳಿ ನಬಾರ್ಡ್‌ ಯೋಜನೆಯಡಿ ನಿರ್ಮಾಣವಾದ ಹೊಸ ಜೆಟ್ಟಿಯಲ್ಲಿ ಸುಮಾರು 850 ರಿಂದ 1000 ಬೋಟ್‌ಗಳು ನಿಲ್ಲುವುದಕ್ಕೆ ಮಾತ್ರ ಅವಕಾಶವಿದೆ. ಉಳಿದ ಬೋಟುಗಳನ್ನು ಹೊಳೆಯಲ್ಲಿ ನಿಲ್ಲಿಸಬೇಕಾಗಿದೆ.

ಪ್ರಾಕೃತಿಕ ವಿಕೋಪದ ಸಮಯದಲ್ಲಿ ರಾಜ್ಯದ ಹೊರಬಂದರು, ಹೊರ ರಾಜ್ಯದ ಬೋಟುಗಳು ಇಲ್ಲಿಗೆ  ಬರುತ್ತವೆ. ಇನ್ನು ನಾಡದೋಣಿಗಳಾದ ಕಂತುಬಲೆ, ಪಟ್ಟಬಲೆ, ಟ್ರಾಲ್‌ದೋಣಿ, ಡಿಸ್ಕೊ, ಕೈರಂಪಣಿ ಸೇರಿದಂತೆ ಒಟ್ಟು 2600 ದೋಣಿಗಳಿಗೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ನಿಲ್ಲಲು ನೆಲೆ ಇಲ್ಲದಂತಾಗಿದೆ.

ರಾಜ್ಯ ಸರಕಾರಕ್ಕೆ ಒತ್ತಡ

ಬೋಟುಗಳ ಸಂಖ್ಯೆಗೆ ಅನುಗುಣವಾಗಿ ಜೆಟ್ಟಿ ವಿಸ್ತರಣಾ ಕೆಲಸಗಳು ಆಗಬೇಕು. ರಾಜ್ಯದ ಮೀನುಗಾರಿಕಾ ಬಂದರುಗಳ ಅಭಿವೃದಿಗೆ ಕೇಂದ್ರ ಸರಕಾರ 1600 ಕೋ. ರೂ. ಈಗಾಗಲೇ ಅನುದಾನ ನೀಡಿದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಸರಕಾರ ತನ್ನ ಅನುಪಾತದ ಹಣವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಬಂದರು ವಿಸ್ತರಣೆಗೊಳ್ಳದೇ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ. ಶೀಘ್ರ ಸ್ಪಂದನೆಗೆ ರಾಜ್ಯ ಸರಕಾರಕ್ಕೆ ಒತ್ತಡ ಹೇರಲಾಗುವುದು.

– ಯಶ್‌ಪಾಲ್‌ ಸುವರ್ಣ, ಶಾಸಕರು, ಉಡುಪಿ

ಅಂದಾಜು ಪಟ್ಟಿ ಸಲ್ಲಿಕೆ

ಪಡುಕರೆ ಭಾಗದಲ್ಲಿ ನಿರ್ಮಾಣವಾಗಲಿರುವ 650 ಮೀ. ಜೆಟ್ಟಿ ವಿಸ್ತರಣೆಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಮೀನುಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಲಾಗಿದೆ. ಔಟರ್‌ ಹಾರ್ಬರ್‌ ನಿರ್ಮಾಣದ ಬಗ್ಗೆ
ಮೀನುಗಾರಿಕೆ ಇಲಾಖೆಯ ಎಂಜಿನಿಯರ್‌ಗಳು ಅಧ್ಯಾಯನ ತಂಡವನ್ನು ರಚಿಸಿ ವರದಿ ನೀಡಿಲಿದ್ದಾರೆ. ಆ ಬಳಿಕವಷ್ಟೇ ಮುಂದಿನ ಕಾರ್ಯಯೋಜನೆಯನ್ನು ಕೈಗೊಳ್ಳಲಾಗುವುದು.

– ಹರೀಶ್‌ ಕುಮಾರ್‌, ಹೆಚ್ಚುವರಿಗೆ ನಿರ್ದೇಶಕರು, ಮೀನುಗಾರಿಕೆ ಇಲಾಖೆ ಮಲ್ಪೆ

ಬೊಬ್ಬರ್ಯ ಪಾದೆ ಬಳಿಯೂ ಲಂಗರು:

ಕಲ್ಮಾಡಿ ಬೊಬ್ಬರ್ಯ ಪಾದೆಯ ಬಳಿ ಹೊಳೆಯ ಬದಿಯಲ್ಲಿ ನಾಡದೋಣಿ, ಸಣ್ಣಗಾತ್ರದ ಯಾಂತ್ರಿಕ ದೋಣಿಗಳು ಸೇರಿದಂತೆ ಒಟ್ಟು 700 ರಷ್ಟು ದೋಣಿಗಳನ್ನು ಇಲ್ಲಿ ಲಂಗರು ಹಾಕಲಾಗಿದೆ. ಇಲ್ಲಿನ ಹೊಳೆಗೆ ಪಡುಕರೆ ಸೇತುವೆ ಅಡ್ಡಲಾಗಿ ಇರುವುದರಿಂದ ದೊಡ್ಡಗಾತ್ರದ ಬೋಟುಗಳು ಚಲಿಸಲು ತಡೆಯಾಗುತ್ತಿದೆ. ಪಡುಕರೆ ಭಾಗದಲ್ಲಿ ಯಾಂತ್ರಿಕ ಬೋಟು ತಂಗಲು 500 ಮೀಟರ್‌ ಉದ್ದದ ಜೆಟ್ಟಿ, ನಾಡದೋಣಿಗೆ 150 ಮೀ. ಜೆಟ್ಟಿ ನಿರ್ಮಾಣ, ಮಾತ್ರವಲ್ಲದೆ ಬಂದರು ಭಾಗದ ಪೂರ್ವದಲ್ಲಿ ನೀರು ಹರಿಯುವ ತೋಡಿನಲ್ಲಿ ನಾಡದೋಣಿಗೆ ತಂಗುದಾಣ ನಿರ್ಮಾಣ ಪ್ರಸ್ತಾವನೆಯನ್ನು ಎರಡು ಮೂರು ವರ್ಷಗಳ ಹಿಂದೆಯೂ ಮೀನುಗಾರ ಸಂಘ ಸರಕಾರಕ್ಕೆ ನೀಡಿದ್ದು ಇದುವರೆಗೆ ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next