Advertisement

5.61 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣ’

06:15 AM Aug 04, 2018 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ  5.61 ಕೋ. ರೂ ವೆಚ್ಚದಲ್ಲಿ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಮೂಲ ಸೌಲಭ್ಯ, ಏಲಂ ಕಟ್ಟಡದ ದುರಸ್ತಿ, ಬಂದರು ರಸ್ತೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಮೀನುಗಾರಿಕೆ  ಋತು ಆರಂಭದ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ.

Advertisement

ದಿನನಿತ್ಯ ಸಾವಿರಾರು ಮೀನುಗಾರರು ಒಂದೆಡೆ ಸೇರುವ ಪ್ರದೇಶದಲ್ಲಿ ಕೋಟ್ಯಂತರ ರೂ. ಮೀನುಗಾರಿಕೆ ವ್ಯವಹಾರ ಇಲ್ಲಿ ನಡೆಯುತ್ತದೆ. ಇಲ್ಲಿನ ಮಲ್ಪೆ ಬಂದರು ಏಲಂ ಕಟ್ಟಡ ಶೀಟುಗಳು, ನೆಲಹಾಸು ಸಂಪೂರ್ಣ ಹಾಳಾಗಿತ್ತು. ಈ ಬಗ್ಗೆ ಮೀನುಗಾರರು ಬಂದರು ಏಲಂ ಕಟ್ಟಡ ದುರಸ್ತಿಪಡಿಸುವಂತೆ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸಿದ್ದರು. ಇದರಲ್ಲಿ ಬಂದರು ರಸ್ತೆ ಸೇರಿದಂತೆ ಜೆಟ್ಟಿ ನಿರ್ಮಾಣದ ಪ್ರಸ್ತಾಪವು ಇತ್ತೆನ್ನಲಾಗಿದೆ. ಮೀನುಗಾರಿಕೆ  ಇಲಾಖೆಯ 20 17-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ ಅನುದಾನದಡಿಯಲ್ಲಿ ಕಾಮಗಾರಿಯನ್ನು  ಕೈಗೆತ್ತಿಕೊಳ್ಳಲಾಗಿದೆ.

ಏನೆಲ್ಲ ಕಾಮಗಾರಿಗಳಾಗಿವೆ?
ಬಂದರಿನ ಉತ್ತರ ಭಾಗದ ಬದಿಯಲ್ಲಿ ಖಾಲಿ ಪ್ರದೇಶದಲ್ಲಿ 2.80 ಕೋ. ರೂ. ವೆಚ್ಚದಲ್ಲಿ 70.5 ಮೀ.  ಉದ್ದದ ಜೆಟ್ಟಿ ನಿರ್ಮಿಸಲಾಗಿದೆ. ಬಂದರಿನ ಒಳಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, 1.28 ಕೋ. ರೂ. ವೆಚ್ಚದಲ್ಲಿ 1.2 ಕಿ.ಮೀ . ವ್ಯವಸ್ಥಿತ ದ್ವಿಪಥ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಇವೆರಡು ಕಾಮಗಾರಿ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ. ಉಳಿದಂತೆ ಬಂದರಿನ ಎರಡು ಹರಾಜು ಕಟ್ಟಡದ ದುರಸ್ತಿ ಕಾರ್ಯಗಳನ್ನು ನಡೆಸಲಾಗುತ್ತಿದೆ. 

ಪ್ರಾಂಗಣದ ನೆಲಕ್ಕೆ ಗ್ರಾನೈಟ್ಸ್‌ ಅಳವಡಿಸುವ ಹಾನಿಗೊಂಡ ಮಾಡಿನ ಹಳೆ ಶೀಟನ್ನು ತೆಗೆದು ಹೊಸ ಶೀಟನ್ನು ಅಳವಡಿಸಲಾಗುತ್ತಿದ್ದು  ಈಗಾಗಲೇ ಒಂದು ಪ್ರಾಂಗಣ ಕೆಲಸ ಮುಗಿದಿದ್ದು ಇನ್ನೊಂದು ಪ್ರಾಂಗಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶೇ.75 ಡ್ರಜ್ಜಿಂಗ್‌
ಬಂದರಿನಲ್ಲಿ ಈಗಾಗಲೇ ಶೇ.75ರಷ್ಟು  ಡ್ರೆಜ್ಜಿಂಗ್‌ ಮುಗಿಸಲಾಗಿದೆ. ಮೀನುಗಾರಿಕೆ ಆರಂಭ ಗೊಂಡಿದ್ದರಿಂದ ಉಳಿದ ಕೆಲಸವನ್ನು ಬೋಟುಗಳು ಮೀನುಗಾರಿಕೆಗೆ ತೆರಳಿದ ಬಳಿಕ ನಡೆಯಲಿದೆ. ಬೇಸಿನಿನಲ್ಲಿ ಹೂಳುತುಂಬಿದ್ದರಿಂದ ಬೋಟುಗಳ ಚಲನವಲನಕ್ಕೆ ಸಾಕಷ್ಟು ಸಮಸ್ಯೆಯಾಗಿತ್ತು, ನೀರಿಗೆ ಆಕಸ್ಮಿಕವಾಗಿ ಬಿದ್ದ ಸಂದರ್ಭದಲ್ಲಿ ಮೀನುಗಾರರನ್ನು ರಕ್ಷಿಸಲು ಕಷ್ಟ ಸಾಧ್ಯವಾಗಿತ್ತು, ಈ ಬಗ್ಗೆ ಮೀನುಗಾರರು ಹಲವು ದಿನಗಳಿಂದ ಸಮಸ್ಯೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಮುಂಬೈಯ ಯುನಿಕ್‌ ಡ್ರೆಜ್ಜಿಂಗ್‌ ಸಂಸ್ಥೆ  ಡ್ರಜ್ಜಿಂಗ್‌ ಕಾಮಗಾರಿಯನ್ನು ಕೈಗೊಂಡಿದೆ.

Advertisement

ತಾಂತ್ರಿಕ ಕೆಲಸ ಅಪೂರ್ಣ
ಮಳೆಗಾಲದಲ್ಲಿ ಬೋಟನ್ನು  ದಕ್ಕೆಯಲ್ಲಿ ನಿಲ್ಲಿಸಲಾಗುವುದರಿಂದ ಡ್ರಜ್ಜಿಂಗ್‌ ಕೆಲಸ  ಸ್ಥಗಿತಗೊಳಿಸಲಾಗಿತ್ತು. ಅಗಸ್ಟ್‌ನಲ್ಲಿ ಬೋಟ್‌ಗಳು ಸಮುದ್ರಕ್ಕೆ ತೆರಳಿದ ಬಳಿಕ ಮತ್ತೆ ಕಾಮಗಾರಿ ಆರಂಭಿಸಲಾಗುವುದು. ಹರಾಜು ಪ್ರಾಂಗಣದ ನೆಲಕ್ಕೆ ಗ್ರಾನೈಟ್‌ ಅಳವಡಿಸುವ ಕೆಲಸಗಳು ಮುಗಿದಿದೆ. ಪ್ರಾಂಗಣದ ಮೇಲ್ಛಾವಣೆ ಶೀಟು ಆಳವಡಿಸುವ ಕೆಲಸ ಆಗಬೇಕಾಗಿದೆ. ಮೇಲ್ಛಾವಣಿ ವಿನ್ಯಾಸಗೊಳಿಸುವ ಬಗ್ಗೆ ಮೀನುಗಾರಿಕೆ  ಇಲಾಖೆಯ ಗಮನಕ್ಕೆ ತರಲಾಗಿದ್ದು  ತಾಂತ್ರಿಕ ಕೆಲಸಗಳು ಆಗಬೇಕಾಗಿದ್ದು ಅದು ಮುಗಿದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ನಾಗರಾಜ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಬಂದರು ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next