ಉಡುಪಿ: ಮಲ್ಪೆ ಬಂದರಿನಲ್ಲಿ ದೋಣಿಗಳು, ಮೀನುಗಾರರು ಮತ್ತು ಪ್ರವಾಸಿಗರ ಭದ್ರತೆಗಾಗಿ ದಿನದ 24 ಗಂಟೆಯೂ ಭದ್ರತಾ ಸಿಬಂದಿ ನಿಯೋಜಿಸಲು ತೀರ್ಮಾನಿಸಲಾಗಿದೆ.
ದೋಣಿಗಳ ರಕ್ಷಣೆಗೆ ಖಾಸಗಿ ಭದ್ರತಾ ಸಿಬಂದಿಯನ್ನು ನೇಮಿಸಲು ದೋಣಿ ಮಾಲಕರ ಸಂಘಗಳಿಗೆ ತಿಳಿಸಲಾಯಿತು. ಅಲ್ಲದೆ ಮೀನುಗಾರಿಕಾ ಇಲಾಖೆ, ಸಿಎಸ್‌ಪಿ ಮತ್ತು ಮೀನುಗಾರರನ್ನು ಒಳಗೊಂಡ ತಂಡದೊಂದಿಗೆ ಗಸ್ತು ನಡೆಸಲು ನಿರ್ಧರಿಸಲಾಯಿತು. ಸಿಎಸ್‌ಪಿ ಮತ್ತು ಸ್ಥಳೀಯ ಪೊಲೀಸ್ ಸಿಬಂದಿ ರಾತ್ರಿ ಗಸ್ತು ನಡೆಸಲು ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಪಾಯಿಂಟ್ ಪುಸ್ತಕ ಇರಿಸಲು ತೀರ್ಮಾನಿಸಲಾಯಿತು.
ಫಿಶಿಂಗ್ ವಾರ್ಡನ್
ಮೀನುಗಾರಿಕೆ ಇಲ್ಲದ ದಿನಗಳಲ್ಲಿ ನಿಲುಗಡೆಗೊಳಿಸುವ ದೋಣಿಗಳ ರಕ್ಷಣೆಗಾಗಿ ಸಿಸಿ ಕೆಮರಾ, ಹೈಮಾಸ್ಟ್ ದೀಪ, ದಾರಿದೀಪ ಅಳವಡಿಸಬೇಕು, ನಾದುರಸ್ತಿಯಲ್ಲಿರುವವನ್ನು ದುರಸ್ತಿಗೊಳಿಸ ಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಸತೀಶ್ ಕುಂದರ್ ಮತ್ತಿತರರು ಮನವಿ ಮಾಡಿದರು. ಇದಕ್ಕೆ ಮೀನುಗಾರಿಕಾ ಇಲಾಖಾಧಿಕಾರಿಗಳು ಒಪ್ಪಿಗೆ ನೀಡಿದರು. ದೋಣಿ ಮತ್ತು ಮೀನುಗಾರರ ಚಲನವಲನಗಳನ್ನು ದಾಖಲಿಸಲು ಫಿಶಿಂಗ್ ವಾರ್ಡನ್‌ಗಳನ್ನು ಕೂಡ ನೇಮಿಸುವ ಬಗ್ಗೆ ಚರ್ಚಿಸಲಾಯಿತು.
Advertisement
ಸೋಮವಾರ ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
Related Articles
Advertisement
ಪ್ರವಾಸಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಬೆಂಕಿ ಮತ್ತು ಇತರ ನೈಸರ್ಗಿಕ ಅವಘಡದ ಸಮಯದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳ ಸುಗಮ ಸಂಚಾರಕ್ಕೆತಡೆಯಾಗುವಂತೆ ದೋಣಿಗಳನ್ನು ನಿಲ್ಲಿಸಬಾರದು ಮತ್ತು ಬಲೆಗಳನ್ನು ದಾರಿಯಲ್ಲಿ ಹಾಕಬಾರದುಎಂದು ಸೂಚಿಸಲಾಯಿತು. ನಿಲುಗಡೆಗೊಂಡಿರುವ ದೋಣಿಗಳಲ್ಲಿ ಆಹಾರ ತಯಾರು ಮಾಡಬಾರದು, ಸಂಜೆ 6 ಗಂಟೆಯ ಅನಂತರ ದುರಸ್ತಿ ಕೆಲಸ ಮಾಡಬಾರದು, ಅತ್ಯಲ್ಪ ಪ್ರಮಾಣದ ಇಂಧನವನ್ನು ಮಾತ್ರ ಇಡಬೇಕು ಎಂದು ಸೂಚಿಸಲಾಯಿತು.
ಅಕ್ರಮ ವಿರುದ್ಧ ಕ್ರಮ
ಬೇರೆ ರಾಜ್ಯಗಳ ದೋಣಿಗಳು ಮತ್ತು ಅಕ್ರಮ ಮೀನುಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ದೋಣಿಗಳ ಮೇಲೆ 2.5 ಲ.ರೂ. ದಂಡ ವಿಧಿಸಲು ಸೂಕ್ತ ಆದೇಶಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದರು.
3 ತಿಂಗಳೊಳಗೆ ಕಲರ್ ಕೋಡಿಂಗ್ ಪೂರ್ಣ
ಎಲ್ಲ ಯಾಂತ್ರೀಕೃತ ದೋಣಿಗಳಿಗೆ ಕಲರ್ ಕೋಡಿಂಗ್ ಪೂರ್ಣಗೊಂಡಿದೆ. ನಾಡ ದೋಣಿ ಗಳ ಕಲರ್ ಕೋಡಿಂಗ್ ಸುಮಾರು ಶೇ. 60 ಆಗಿದೆ. ಉಳಿದಿರುವುದನ್ನು3 ತಿಂಗಳೊ ಳಗೆ ಪೂರ್ಣಗೊಳಿಸಲಾಗುವುದು ಎಂದು ಉಪನಿರ್ದೇಶಕರು ಮತ್ತು ಸಂಘದ ಪದಾಧಿ ಕಾರಿಗಳು ತಿಳಿಸಿದರು. ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ಮಾತನಾಡಿ, ಬಯೋ ಮೆಟ್ರಿಕ್ ಕಾರ್ಡ್ ಸಿದ್ಧವಾಗಿದೆ. ಶಿಬಿರ ನಡೆಸಿ ಸಿಗದಿದ್ದವರಿಗೆ ವಿತರಿಸಲಾಗುವುದು ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್, ಪೊಲೀಸ್, ಕರಾವಳಿ ರಕ್ಷಣಾ ಪಡೆ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಉಚಿತ ಟ್ರಾನ್ಸ್ ಪಾಂಡರ್‌ಗೆ ಮನವಿ
ಅಪಾಯದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುಕೂಲ ವಾಗುವ ಟ್ರಾನ್ಸ್ ಪಾಂಡರ್ ಉಪಕರಣ ಅಳವಡಿಸಿರುವ ದೋಣಿಗಳು ಎಂಎಂಡಿ (ಮರ್ಕೆಂಟೈಲ್ ಮೆರೈನ್ ಡಿಪಾರ್ಟ್‌ಮೆಂಟ್)ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು. ‘ಈ ಉಪಕರಣ ದುಬಾರಿಯಾಗಿರುವುದರಿಂದ ಸರಕಾರ ಉಚಿತವಾಗಿ ನೀಡಬೇಕು’ ಎಂದು ಮೀನುಗಾರರು ಮನವಿ ಮಾಡಿದರು. ಇದನ್ನು ಮೀನುಗಾರರು ಒಟ್ಟಾಗಿ ಖರೀದಿಸಿದರೆ ಕಂಪೆನಿಗಳು ಬೆಲೆ ಕಡಿತ ಮಾಡುತ್ತವೆ ಎಂದು ಅಧಿಕಾರಿಗಳು ಸಲಹೆ ನೀಡಿದರು.