ಮಲ್ಪೆ: ಮಲ್ಪೆಯಿಂದ ಸಿಟಿಜನ್ ಸರ್ಕಲ್ಗೆ ಹೋಗುವ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡ ನಿರ್ಮಾಣವಾಗಿದ್ದು ವಾಹನ ಮತ್ತು ಜನಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಳೆಗೆ ರಸ್ತೆಯ ಜೆಲ್ಲಿ ಎದ್ದು ಹೋಗಿ ಭೀಮಗಾತ್ರದ ಹೊಂಡ ಬಾಯ್ತೆರೆದು ನಿಂತು ಮೃತ್ಯುವಿಗೆ ಅಹ್ವಾನ ನೀಡುವಂತಿದೆ.
ಇದು ಮಲ್ಪೆ ಬೀಚ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗೆ ಕೆಸರು ನೀರು ತುಂಬಿದ್ದು ಹೊಂಡ ತಪ್ಪಿಸಲು ಹೋಗಿ ವಾಹನ ಸವಾರರು ಅಡ್ಡಾದಿಡ್ಡಿ ಚಲಾಯಿಸಿ, ಅಪಘಾತಗಳು ಸಂಭವಿಸು ವಂತಾಗಿದೆ. ಈಗಾಗಲೇ ದ್ವಿಚಕ್ರ ಸವಾರರು ಹಲವು ಬಾರಿ ವಾಹನ ಸಮೇತ ಬಿದ್ದು ಗಾಯಗೊಂಡ ಘಟನೆ ನಡೆದಿವೆ..
ಮಳೆಗಾಲಕ್ಕೆ ಮೊದಲು ಸ್ಥಳೀಯರು ಒಂದಷ್ಟು ಸಿಮೆಂಟ್ ಜಲ್ಲಿ ಹುಡಿ ಹೊಂಡಕ್ಕೆ ಸುರಿದು ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರೂ ಮಳೆನೀರು ಹರಿದು ಹೋಗಲು ಇಲ್ಲಿನ ಚರಂಡಿಯಲ್ಲಿದ್ದ ಹೂಳನ್ನು ತೆರವುಗೊಳಿಸದ ಕಾರಣ ನೀರು ರಸ್ತೆಯಲ್ಲಿ ಹರಿದು ಮತ್ತೆ ರಸ್ತೆಯಲ್ಲಿ ಹೊಂಡ ಬಿದ್ದಿದೆ. ಸಾರ್ವಜನಿಕರು ಇದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಇಷ್ಟೊಂದು ಬೃಹದಾಕಾರವಾಗಿ ಹೊಂಡ ಬಿದ್ದರೂ ಸಂಬಂಧಪಟ್ಟವರು ಹೊಂಡ ಮುಚ್ಚುವ ಕಾರ್ಯ ಕೈಗೊಂಡಿಲ್ಲ. ನಗರಸಭೆ ಚುನಾವಣೆ ನಡೆದು ವರುಷ ಕಳೆದರೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಯಾಗದ ಕಾರಣ ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವಂತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂಬುದು ನಾಗರಿಕರ ಆರೋಪ.
ಹೊಂಡ ಕಾಣದೆ ಅಪಘಾತ
ಸೋಮವಾರ ರಾತ್ರಿ ಬಿದ್ದ ನಿರಂತರ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಇಲ್ಲಿನ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಇಲ್ಲಿರುವ ಹೊಂಡ ಕಾಣದೆ ಕೆಲವರು ಬೈಕ್ ಮೇಲಿಂದ ಬಿದ್ದು ಇನ್ನು ಕೆಲವರು ಮುಂದೆ ಹೋಗಲು ಭಯಪಟ್ಟು ವಾಪಸ್ ತೆರಳಿದ್ದಾರೆ.
ಅಪಘಾತದ ಸಾಧ್ಯತೆ ಹೆಚ್ಚಳ
ಇಲ್ಲಿನ ಹೊಂಡದ ಗಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಂದೆ ಪ್ರಾಣಾಪಾಯದ ಸಾಧ್ಯತೆಯೂ ಇದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಸರಿಪಡಿಸುವಂತೆ ಈಗಾಗಲೇ ದೂರು ನೀಡಿದ್ದೇವೆ. ಸಂಬಂಧಪಟ್ಟವರು ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾಯಕಕ್ಕೆ ಮುಂದಾಗಬೇಕಾಗಿದೆ, -ಮಧು ಬಿ. ಇ., ಮಲ್ಪೆ ಠಾಣಾಧಿಕಾರಿ