Advertisement

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

05:44 PM Dec 22, 2024 | Team Udayavani |

ಮಲ್ಪೆ: ಕ್ರಿಸ್ಮಸ್‌ ಹತ್ತಿರ ಬರುತ್ತಿದ್ದಂತೆಯೇ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ರಾತ್ರಿ ವೇಳೆ ಕ್ಯಾರೋಲ್‌ (ರಾಗದ ಕೂಟ) ಸದ್ದು ಕೇಳಿಬರುತ್ತದೆ. ಮಕ್ಕಳಿಗೆ ಮನರಂಜನೆ ನೀಡುವ, ಅಬಾಲ ವೃದ್ಧರಾದಿಯಾಗಿ ಸಂಭ್ರಮಿಸುವ ಕ್ಯಾರೋಲ್‌ ಉಡುಪಿಯ ಎಲ್ಲ ಭಾಗಗಳಲ್ಲಿ ಭಾರೀ ಜನಾಕರ್ಷಣೆ ಪಡೆದಿದೆ.

Advertisement

ಮಲ್ಪೆ ಭಾಗದಲ್ಲಿ ಇದು ಕೇವಲ ಕ್ರಿಶ್ಚಿಯನ್ನರ ಸಂಭ್ರಮವಲ್ಲ. ಕೆಲವು ಕಡೆ ಹಿಂದೂಗಳು ಮತ್ತು ಮುಸ್ಲಿಮರು ಕೂಡ ಈ ತಂಡಗಳನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಹಿಂದೆ ಪುರುಷರು ಮಾತ್ರ ಈ ರಾಗದ ಕೂಟದಲ್ಲಿ ಭಾಗವಹಿಸುತ್ತಿದ್ದರು. ಈಗ ಮಕ್ಕಳು, ಮಹಿಳೆಯರು, ಪುರುಷರು ಹೀಗೆ ಹಿರಿಕಿರಿಯರೆಲ್ಲರೂ ಭಾಗವಹಿಸುತ್ತಾರೆ. ಅನ್ಯ ಧರ್ಮೀಯರು ಕೂಡ ನಮ್ಮನ್ನು ಮನೆಗೆ ಆಹ್ವಾನಿಸುತ್ತಾರೆ. ನಗರ ಪ್ರದೇಶದಲ್ಲಿ ಈ ಕೂಟದವರು ಮನೆ ಮನೆಗೆ ತೆರಳುವ ಬದಲು ಒಂದೆಡೆ ದೇವಾಲಯ ಅಥವಾ ಸಭಾಂಗಣಗಳಲ್ಲಿ ತಮ್ಮ ಸದಸ್ಯರನ್ನು ಸೇರಿಸಿ ಈಗ ಕ್ರಿಸ್ಮಸ್‌ ಕ್ಯಾರೋಲ್‌ ನಡೆಸಿ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಮಲ್ಪೆ ಯುಬಿಎಂ ಚರ್ಚ್‌ನ ಧರ್ಮಗುರುಗಳಾದ ಕುಮಾರ್‌ ಸಲಿನ್ಸ್‌.

ಸಾಂತಾಕ್ಲಾಸ್‌ ಆಕರ್ಷಣೆ
ಕ್ರಿಸ್ಮಸ್‌ ಕ್ಯಾರೋಲ್‌ನಲ್ಲಿ ಸಾಂತಾಕ್ಲಾಸ್‌ ಪ್ರಮುಖ ಆಕರ್ಷಣೆ. ರಾಗದ ಕೂಟದಲ್ಲಿರುವ ಎಲ್ಲ ಜನರಿಗೆ ಮನೆಯವರು ತಿಂಡಿ, ಪಾನೀಯ ಹಾಗೂ ಇನ್ನು ಕೆಲವರು ಊಟದ ವ್ಯವಸ್ಥೆಯನ್ನು ಮಾಡುವುದಲ್ಲದೆ ತಮ್ಮ ಶಕಾöನುಸಾರ ಕಾಣಿಕೆಯನ್ನು ನೀಡುತ್ತಾರೆ. ಈ ಹಿಂದೆ ರಾತ್ರಿ ಇಡೀ ನಡೆಯುತಿದ್ದ ಈ ರಾಗದ ಕೂಟ ಇದೀಗ ತಡರಾತ್ರಿ 1 ಗಂಟೆಯವರೆಗೆ ಇರುತ್ತದೆ. ಒಂದು ಮನೆಯಲ್ಲಿ ಕನಿಷ್ಠ 10 ನಿಮಿಷದ ಕಾರ್ಯಕ್ರಮ ನೀಡುತ್ತಾರೆ.

ಕ್ಯಾರೋಲ್‌ ಎಂದರೇನು?
ಚರ್ಚ್‌ನ ಗಾಯನ ವೃಂದದವರು ಆ ದೇವಾಲಯಕ್ಕೆ ಸಂಬಂಧಪಟ್ಟ ಮನೆಗಳಿಗೆ ರಾತ್ರಿ ಹೊತ್ತಿನಲ್ಲಿ ತೆರಳಿ ಯೇಸು ಕ್ರಿಸ್ತರ ಜನನವನ್ನು ಸಾರುವ ಸಂಗೀತವನ್ನು ಹಾಡಿ, ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ಕೋರುವುದೇ ಕ್ರಿಸ್ಮಸ್‌ ಕ್ಯಾರೋಲ್‌. ಸ್ಥಳೀಯ ಭಾಷೆಯಲ್ಲಿ ರಾಗದ ಕೂಟ ಎಂದು ಕರೆಯುತ್ತಾರೆ. ಈ ತಂಡದಲ್ಲಿ ಸುಮಾರು 20 ಜನರಿರುತ್ತಾರೆ.

ನಿರಂತರ ಕಾರ್ಯಕ್ರಮ
ಕಳೆದ 35 ವರ್ಷಗಳಿಂದ ಇಂದಿನವರೆಗೂ ನಿರಂತರವಾಗಿ ತಂಡ ನಮ್ಮ ಮನೆಗೆ ಬಂದು ಸಂಗೀತ ಕಾರ್ಯಕ್ರಮ ನೀಡುತ್ತಿದೆ. ನಮ್ಮ ಮನೆಗೆ ಮಾತ್ರವಲ್ಲ ಸುತ್ತಮುತ್ತ ಇರುವ 4-5 ಮನೆಗಳಿಗೆ ಹೋಗುತ್ತಾರೆ.
– ಪೂರ್ಣಿಮಾ ನಾರಾಯಣ, ಶಿಕ್ಷಕಿ, ಮಲ್ಪೆ-ಕೊಳ

Advertisement
Advertisement

Udayavani is now on Telegram. Click here to join our channel and stay updated with the latest news.

Next