Advertisement
ನೌಕಾಸೇನೆ, ಕರಾವಳಿ ರಕ್ಷಣಾ ಪಡೆ, ಹೆಲಿಕಾಪ್ಟರ್, ಸುಸಜ್ಜಿತ ಬೋಟ್‌ಗಳನ್ನು ಬಳಸಿ ಎಷ್ಟೇ ಹುಡುಕಾಡಿದರೂ ಪ್ರಯೋಜನ ವಾಗಿಲ್ಲ. ಡಿ. 13ರಂದು ರಾತ್ರಿ ಮೀನುಗಾರಿಕೆಗೆ ತೆರಳಿ ಎರಡೇ ದಿನಗಳಲ್ಲಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು.
ಸಿಂಧುದುರ್ಗ ಜಿಲ್ಲೆಯ ದೇವಗಢ, ಮಾಲ್ವಣ್ ಬಳಿ ಬೋಟ್ ಮತ್ತು ಮೀನುಗಾರ ರನ್ನು ಬಚ್ಚಿಟ್ಟಿರುವ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಮೀನುಗಾರರ ಅಭಿಪ್ರಾಯ. ಗುಡ್ಡಗಾಡುಗಳಿಂದ ಸುತ್ತುವರಿದ ಈ ಭಾಗ ದುರ್ಗಮ ಪ್ರದೇಶವಾಗಿದ್ದು, ಜನಸಾಮಾನ್ಯರು ತೆರಳಲು ಆಸಾಧ್ಯ. ಕೇಂದ್ರ ಸರಕಾರ ಸೇನೆಯನ್ನು ಕಳುಹಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಬೇಕು ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಆಗ್ರಹಿಸಿದ್ದಾರೆ. ಉಗ್ರ ಹೋರಾಟ
ರಾಜ್ಯದ ಗೃಹ ಸಚಿವರು ಮೀನುಗಾರರ ಬಾಯಿ ಮುಚ್ಚಿಸಲು ಸಭೆ ನಡೆಸಿದ್ದಾರೆ ವಿನಾ ಶೋಧ ಕಾರ್ಯದಲ್ಲಿ ಅದು ಯಾವುದೇ ಪರಿಣಾಮ ಬೀರಿಲ್ಲ. ಆವರ ಹೇಳಿಕೆಯಂತೆ ಮೂರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಸಭೆಯೂ ಆಗಿಲ್ಲ ಎಂದು ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಆರೋಪಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇಸ್ರೋ ಅಧ್ಯಕ್ಷರೇ ಹೇಳಿರುವಂತೆ ಈ ವರೆಗೆ ಅವರನ್ನು ಯಾರೂ ಸಂಪರ್ಕಿಸಿಲ್ಲ. ಮೀನುಗಾರರ ಬದುಕಿನಲ್ಲಿ ಸರಕಾರದ ಚೆಲ್ಲಾಟ ಮುಂದುವರಿದಿದೆ. ರಾಜ್ಯ ಸರಕಾರ ತತ್‌ಕ್ಷಣ ಕೇಂದ್ರದ ನೆರವು ಪಡೆದು ಪತ್ತೆ ಹಚ್ಚಬೇಕು, ಇಲ್ಲವೇ ರಾಜ್ಯದ ಮೀನುಗಾರಿಕೆ ಮತ್ತು ಗೃಹಸಚಿವರಿಬ್ಬರೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಮುಂದಿನ ದಿನಗಳಲ್ಲಿ ಮೀನುಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಯಶ್‌ಪಾಲ್ ಎಚ್ಚರಿಸಿದ್ದಾರೆ.
Related Articles
ಕಲ್ಮಾಡಿ ಬೊಬ್ಬರ್ಯ ಪಾದೆಯಲ್ಲಿ ಶನಿವಾರ ರಾತ್ರಿ ನಡೆದ ಗಡುವಾಡು ಇಳಿಯುವ ಬೊಬ್ಬರ್ಯನ ಸಿರಿಸಿಂಗಾರದ ನೇಮದಲ್ಲೂ ಬೊಬ್ಬರ್ಯನಿಂದ ಮೀನುಗಾರರು ಗೌಪ್ಯ ಸ್ಥಳದಲ್ಲಿ ಇದ್ದಾರೆ. ನಿಮ್ಮ ಪ್ರಯತ್ನದ ಹಿಂದೆ ನಾನಿದ್ದು ಬರಮಾಡಿಕೊಳ್ಳುತ್ತೇನೆ ಎಂಬ ಅಭಯ ಲಭಿಸಿದೆ ಎನ್ನಲಾಗಿದೆ.
Advertisement
ಮನೆಗಳಲ್ಲಿ ಕಣ್ಣೀರೇ ಮಾತು… ಮಲ್ಪೆ: ಮಾತು ಹೊರಡದೆ ದುಃಖ ಉಮ್ಮಳಿಸಿ ಕೆನ್ನೆ ಸವರುವ ಅಶ್ರುಧಾರೆ. ಸಾಂತ್ವನ ಹೇಳುವ ಮನಸ್ಸುಗಳು, ಕಣ್ಣೀರು ಒರೆಸುವ ಕೈಗಳಿಗೆ ವಿರಾಮವೇ ಇಲ್ಲ. ಮನಸ್ಸು ಭಾರ, ಮೌನ. ಏನಾಗುವುದೋ ಎಂಬ ದುಗುಡ ದುಮ್ಮಾನ, ನೀರವ ಮೌನ. ಇದು ನಾಪತ್ತೆಯಾಗಿರುವ ಮೀನುಗಾರರಾದ ಬಡಾನಿಡಿಯೂರು ಪಾವಂಜಿಗುಡ್ಡೆಯ ಚಂದ್ರಶೇಖರ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಅವರ ಮನೆಯ ವಾತಾವರಣ. ಪ್ರತೀ ಕ್ಷಣ ತಮ್ಮವರ ಇರುವಿಕೆ ಬಗ್ಗೆ ಸುಳಿವು, ಶುಭಸುದ್ದಿ ಕೇಳಿಬಂದೀತು ಎಂಬ ಆಶಾವಾದವೊಂದೇ ಭರವಸೆಯ ಎಳೆಯಾಗಿ ಬದುಕನ್ನು ಹಿಡಿದಿರಿಸಿದೆ. ನನ್ನವರು ಸಿಕ್ಕಿದರೇ?
ನಾಪತ್ತೆ ಬಗ್ಗೆ ಡಿ. 21ರ ರಾತ್ರಿಯೇ ಮಾಹಿತಿ ಬಂದಿದ್ದರೂ ಚಂದ್ರಶೇಖರ್ ಪತ್ನಿಗೆ ವಿಷಯ ತಿಳಿದದ್ದು ಡಿ. 24ರಂದು. ಅದೂ ಬೋಟನ್ನು ಹಿಡಿದಿರಿಸಿದ್ದಾರೆ ಎಂದಷ್ಟೇ. ಡಿ. 25ರ ಬೆಳಗ್ಗೆ ಪತ್ರಿಕೆಯಲ್ಲಿ ನಾಪತ್ತೆ ಸುದ್ದಿಯನ್ನು ಓದಿ ತಿಳಿದ ಶ್ಯಾಮಲಾ ಆಘಾತಗೊಂಡರು. ಗಂಡನ ಧ್ವನಿ ಕೇಳದೆ ತಿಂಗಳಾಗಿದೆ. ಆಕೆ ಮನೆಯಿಂದ ಹೊರಗೆ ಬರುತ್ತಿಲ್ಲ. ಸಂತೈಸುವ ಸಂಬಂಧಿಕರು, ಆಪ್ತರಲ್ಲಿ ನನ್ನವರು ಸಿಕ್ಕಿದರೇ, ಆದಷ್ಟು ಬೇಗ ಹುಡುಕಿಕೊಡಿ ಎಂದು ಮುಖ ಮುಚ್ಚಿ ಅಳುತ್ತಾರೆ ಆಕೆ. ಮೌನಕ್ಕೆ ಶರಣು
ದಾಮೋದರ ಸಾಲ್ಯಾನ್ ಪತ್ನಿ ಮೋಹಿನಿ ಅವರಿಗೆ ವಿಷಯ ತಿಳಿದದ್ದು ಶ್ಯಾಮಲಾರಿಗಿಂತಲೂ ನಾಲ್ಕು ದಿನ ತಡವಾಗಿ. ನಾಪತ್ತೆ ವಿಚಾರ ಗೊತ್ತಾದಲ್ಲಿಂದ ಆಕೆ ಆಘಾತದಿಂದ ಮಾತೇ ಆಡುತ್ತಿಲ್ಲ. ಮೊದಲ ಕೆಲವು ದಿನ ಊಟ, ನಿದ್ದೆ ಮಾಡದೆ ಕಾಲ ಕಳೆಯುತ್ತಿದ್ದರು. ದಾಮೋದರ ಅವರ ತಾಯಿ ಸೀತಾ ಸಾಲ್ಯಾನ್ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಅನಾರೋಗ್ಯದಿಂದಿರುವ ತಂದೆ ಸುವರ್ಣ ತಿಂಗಳಾಯ ಈಗ ಇನ್ನಷ್ಟು ಹೈರಾಣಾಗಿದ್ದಾರೆ. ಮನೆಯಲ್ಲಿ ಟಿವಿ ಹಚ್ಚುತ್ತಿಲ್ಲ, ಪತ್ರಿಕೆಗಳನ್ನು ಓದಲು ಕೊಡುತ್ತಿಲ್ಲ. ಬೊಬ್ಬರ್ಯ ದೈವದ ಅಭಯವೊಂದೇ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ದೈವ ದೇವರಿಗೆ ಮೊರೆ
ಕುಟುಂಬದವರು ಮಾತ್ರವಲ್ಲ, ಗ್ರಾಮಸ್ಥರೆ ಲ್ಲರೂ ದೈವ ದೇವರಿಗೆ ಮೊರೆ ಹೋಗಿದ್ದಾರೆ. ಎಲ್ಲ ದೇವಸ್ಥಾನಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಅಂಜನ, ಆರೂಢ ಪ್ರಶ್ನೆಗಳನ್ನು ಇರಿಸಿ ಚಿಂತನೆ ನಡೆಸಿದ್ದಾರೆ. ಎಲ್ಲೆಡೆಯ ಉತ್ತರ ಒಂದೇ – “ಜೀವಂತವಾಗಿದ್ದಾರೆ, ಬಂಧನದಲ್ಲಿ ಇದ್ದಾರೆ’.