Advertisement

ಆಧ್ಯಾತ್ಮಿಕ, ಪ್ರವಾಸೋದ್ಯಮ ಕೇಂದ್ರವಾಗಿ ಮಲ್ಪೆ ಬೀಚ್‌ ಆಶಯ

09:12 AM Oct 20, 2022 | Team Udayavani |

ಮಲ್ಪೆ: ಉಡುಪಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ರುವ ಪ್ರವಾಸಿ ತಾಣ ಮಲ್ಪೆ ಬೀಚ್‌ ಇದೀಗ ಬಹಳಷ್ಟು ಅಭಿವೃದ್ಧಿ ಕಂಡಿದೆ. ದಿನದಿಂದ ದಿನಕ್ಕೆ ಪ್ರವಾಸಿ ಗರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಪ್ರವಾಸಿ ಧಾಮವನ್ನು ಇನ್ನಷ್ಟು ಆಕರ್ಷಣೀಯ ತಾಣವಾಗಿಸಲು ಇಲ್ಲಿ ಮಧ್ವರ ಪ್ರತಿಮೆಯನ್ನು ಸ್ಥಾಪಿಸಬೇಕೆಂಬ ಬಲವಾದ ಕೂಗು ನಾಗರಿಕರಿಂದ ಕೇಳಿ ಬರುತ್ತಿದೆ.

Advertisement

2 ಬಾರಿ ಕೈತಪ್ಪಿದ ಪ್ರತಿಮೆ ಸ್ಥಾಪನೆ
ಉಡುಪಿಯಲ್ಲಿ ಧಾರ್ಮಿಕತೆ, ಸಾತ್ವಿಕತೆ ಬೇರೂರಲು ಮಧ್ವರ ಕೊಡುಗೆ ಅಪಾರ. ಮಲ್ಪೆ ಸಮುದ್ರ ತೀರದಲ್ಲಿ ಧ್ಯಾನಾಸಕ್ತರಾಗಿದ್ದ ಮಧ್ವಾ ಚಾರ್ಯರಿಗೆ ಶ್ರೀಕೃಷ್ಣನ ಮೂರ್ತಿ ದೊರಕಿದ್ದರಿಂದ ಇದು ಪವಿತ್ರ ಮತ್ತು ಐತಿಹಾಸಿಕ ಸ್ಥಳವಾಗಿದೆ ಎನ್ನಲಾಗಿದೆ. 50 ವರ್ಷಗಳ ಹಿಂದೆ ಇಲ್ಲಿನ ಸಮುದ್ರ ತೀರದಲ್ಲಿ ಮಧ್ವಾಚಾರ್ಯರ ಮೂರ್ತಿ ಸ್ಥಾಪಿಸಬೇಕೆಂಬುದು ಪೇಜಾವರ ಮಠ‌ದ ಹಿಂದಿನ ಶ್ರೀಪಾದರಾದ ವಿಶ್ವೇಶತೀರ್ಥರ ಆಶಯವಾಗಿತ್ತು. ಅಂದು ವಿಶ್ವೇಶತೀರ್ಥ ಶ್ರೀಪಾದರು ಮತ್ತು ಇತರ ಮಠಾಧೀಶರು ಸೇರಿ ಇಲ್ಲಿ ಮಧ್ವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸಿದ್ದರು. ಶಿಲಾನ್ಯಾಸದ ಬಳಿಕ ಮಲ್ಪೆಯಿಂದ ಶ್ರೀಕೃಷ್ಣ ಮಠದ ವರೆಗೆ ಶೋಭಾಯಾತ್ರೆ ಮಾಡಲಾಗಿತ್ತು. ಆ ಬಳಿಕ ಕಾರಣಾಂತರಗಳಿಂದ ಕೈಬಿಡಲಾಗಿತ್ತು.

ಎರಡನೆಯದಾಗಿ 2011ರಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಲ್ಪೆಯಲ್ಲಿ ಮಧ್ವಾಚಾರ್ಯರ ಪ್ರತಿಮೆ ಶಂಕು ಸ್ಥಾಪನೆಗೆ ಉದ್ದೇಶಿಸಿತ್ತು. ಅಂದಿನ ಸಿಎಂ ಸದಾನಂದ ಗೌಡರು 2011ರ ಆ. 21ರಂದು ಶಿಲಾನ್ಯಾಸ ಮಾಡಿದರು. ಮಧ್ವಚಾರ್ಯರು ಶ್ರೀಕೃಷ್ಣನನ್ನು ಎತ್ತಿಕೊಂಡಿರುವ 35 ಅಡಿ ಎತ್ತರದ ಕಲ್ಲಿನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಆದರೆ ಸಿಆರ್‌ಝಡ್‌ ಕಾನೂನಿನ ತೊಡಕು ಎದುರಾಗಿತ್ತು ಎನ್ನಲಾಗಿದೆ.

ಅಧ್ಯಾತ್ಮ, ಪ್ರವಾಸೋದ್ಯಮ ಕೇಂದ್ರ
ಪ್ರಸ್ತುತ ಸಮುದ್ರತೀರದಿಂದ 100 ಮೀ. ಅಂತರದಲ್ಲಿ ನಿರ್ಮಾಣಕ್ಕೆ ಸಿಆರ್‌ಝಡ್‌ ಕಾನೂನಿನಲ್ಲಿ ಅವಕಾಶವಿರುವುದರಿಂದ ಸರಕಾರ ಖಾಸಗಿ ಜಾಗವನ್ನು ಖರೀದಿಸಿ ಮಧ್ವರ ಮೂರ್ತಿ, ಧ್ಯಾನ ಮತ್ತು ಯೋಗಕೇಂದ್ರ ನಿರ್ಮಾಣ ಮಾಡಿದರೆ ಆಧ್ಯಾತ್ಮಿಕ ಮತ್ತು ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಉಡುಪಿಯ ಮಠಾಧೀಶರು ಪ್ರಯತ್ನಿಸಬೇಕು.
– ಪಾಂಡುರಂಗ ಮಲ್ಪೆ, ಅಧ್ಯಕ್ಷರು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ

ಹಿಂದೆ ಬೀಚ್‌ಗೆ ತೀರ್ಥ ಕಲ್ಲೆ ಹೆಸರು
ಹಿರಿಯರ ಪ್ರಕಾರ ಮಲ್ಪೆ ಬೀಚ್‌ ಬಹಳ ಹಿಂದಿನಿಂದಲೂ ತೀರ್ಥಕಲ್ಲೆ ಎಂಬ ಹೆಸರಿನಿಂದ ಪ್ರಖ್ಯಾತವಾಗಿತ್ತು. ತೀರ್ಥಕಲ್ಲೆ ಎಂದರೆ ತೀರ್ಥಸ್ನಾನ ಮಾಡುವ ಸಮುದ್ರತೀರ. ಪ್ರತೀ ಅಮಾವಾಸ್ಯೆ ಅದರಲ್ಲೂ ಎಳ್ಳಮಾವಾಸ್ಯೆಯಂದು ಸಾವಿರಾರು ಜನರು ಸಮುದ್ರಸ್ನಾನಕ್ಕೆ ಬರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next