Advertisement

Malpe: ಈಡೇರದ 5 ದಶಕಗಳ ಬೇಡಿಕೆ, ನಿತ್ಯ ಟ್ರಾಫಿಕ್‌ ಜಾಮ್‌ ಕಿರಿಕಿರಿ

10:05 AM Nov 24, 2023 | Team Udayavani |

ಮಲ್ಪೆ: ಕಿರಿದಾದ ರಸ್ತೆ, ರಸ್ತೆಗೆ ಹೊಂದಿಕೊಂಡಂತೆ ಇರುವ ಹಳೆ ಕಟ್ಟಡಗಳು, ಇವುಗಳ ನಡುವೆ ಹರಸಾಹಸಪಟ್ಟು ಸಾಗುತ್ತಿರುವ ವಾಹನಗಳು. ನಿತ್ಯ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ಜನರು. ಈ ದೃಶ್ಯ ಕಂಡು ಬರುವುದು ಕಳೆದ ಎರಡು ದಶಕಗಳಿಂದ ರಾ. ಹೆದ್ದಾರಿ ಎಂದೆನಿಸಿದ ಮಲ್ಪೆ -ಆದಿಉಡುಪಿ ರಸ್ತೆಯಲ್ಲಿ. ಕಿರಿದಾದ ಈ ರಸ್ತೆ ವಿಸ್ತರಣೆಗೊಳ್ಳಬೇಕು ಎಂಬುದು ಸಾರ್ವಜನಿಕರ ಬಹು ವರ್ಷದ ಬೇಡಿಕೆ. ಆದರೆ ಇಲ್ಲಿಯವರೆಗೆ ರಸ್ತೆ ವಿಸ್ತರಣೆಗೆ ಮುಹೂರ್ತ ಒದಗಿ ಬಂದಿಲ್ಲ ಎನ್ನಲಾಗುತ್ತಿದೆ.

Advertisement

ವಿಸ್ತರಣೆ ಎಂದು?
ಕಳೆದ ಒಂದೂವರೆ ದಶಕಗಳಿಂದಲೂ ರಸ್ತೆ ವಿಸ್ತರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಎಲ್ಲ ಪಕ್ಷದ ಸಂಸದರು, ಶಾಸಕರ ಸಮ್ಮುಖ ಸಭೆಗಳು ಹಲವು ಬಾರಿ ನಡೆದಿತ್ತು. ಆದರೆ ರಸ್ತೆ ವಿಸ್ತರಣೆ ಮಾತ್ರ ಆಗಿಲ್ಲ. ರಸ್ತೆಯ ಎರಡೂ ಬದಿಯಲ್ಲಿ 12 ಮೀಟರ್‌ ತೆರವುಗೊಳಿಸಿ ಚತುಷ್ಪಥ, ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಸರಕಾರಿ ಮೌಲ್ಯದಂತೆ ಪರಿಹಾರ ನೀಡಲಾಗುವುದುದು ಎಂದು ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಆದಿಉಡುಪಿ, ಪಂದುಬೆಟ್ಟುವಿನಲ್ಲಿ ರಸ್ತೆ ಬಳಿ ಇದ್ದ ಮರಗಳನ್ನು ಕಡಿಯಲಾಗಿತ್ತು.

ಮಾತ್ರವಲ್ಲದೆ ಕಲ್ಮಾಡಿ ಹೊಸ ಸೇತುವೆ ನಿರ್ಮಾಣದ ತಳ ಹಂತದ ಕಾಮಗಾರಿ ನಡೆಸಿ ಈಗ ಅರ್ಧದಲ್ಲೇ ಬಿಡಲಾಗಿದೆ. ರಸ್ತೆ ವಿಸ್ತರಣೆ ಗೊಳ್ಳುವುದು ಎಂದು ಎನ್ನುವ ಮಂದಿಗೆ ಈಗ ವಿಸ್ತರಣೆಯ ವಿಷಯ ಅನುಮಾನಕ್ಕೂ ಕಾರಣವಾಗಿದೆ.

ಪ್ರವಾಸಿಗರು ಹೈರಾಣ
ಪ್ರಸಿದ್ಧ ಪ್ರವಾಸಿ ತಾಣ ಸೈಂಟ್‌ ಮೇರೀಸ್‌ ಐಲ್ಯಾಂಡ್‌, ಸೀವಾಕ್‌, ಮಲ್ಪೆ ತೀರದಲ್ಲಿರುವ ಹಲವು ಬೀಚ್‌ಗಳಿಗೆ ತೆರಳುವ ಪ್ರವಾಸಿಗರು ಇದೇ ರಸ್ತೆಯಲ್ಲಿ ಸಾಗಬೇಕು. ಮೊದಲೇ ಕಿರಿದಾದ ರಸ್ತೆ, ಅಂತಹ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಬೇರೆ. ಹಾಗಾಗಿ ನಿತ್ಯ ಟ್ರಾಫಿಕ್‌ ಜಾಮ್‌ ಉಂಟಾಗಿ ಸದಾ ಪ್ರಯಾಣಿಕರು ಪರದಾಡುತ್ತಾರೆ.

5 ದಶಕಗಳ ಬೇಡಿಕೆ
1970ರಿಂದ ಮಲ್ಪೆ ರಸ್ತೆ ವಿಸ್ತರಣೆಗಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕೇವಲ 8 ಅಡಿ ರಸ್ತೆ ಇದಾಗಿದ್ದು, ಒಂದು ವಾಹನ ಎದುರು ಬಂದರೆ ಮತ್ತೂಂದು ವಾಹನ ಮುಂದೆ ಸಾಗಲು ಆಗುವುದಿಲ್ಲ. ಎಷ್ಟೋ ಸಲ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ
ಅನಾರೋಗ್ಯಕ್ಕೀಡಾದವರನ್ನು ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಉದಾಹರಣೆಗಳಿವೆ.ಇದುವರೆಗೆ 5-6 ಬಾರಿ ಸಂಬಂಧಪಟ್ಟವರು ರಸ್ತೆ ವಿಸ್ತರಣೆ ಆಗುತ್ತದೆ ಎಂದು ಗೋಡೆ ಮಾರ್ಕ್‌ ಮಾಡಿ ಹೋಗಿದ್ದರು. ಇಷ್ಟಾದರೂ ಈ ರಸ್ತೆ ಮಾತ್ರ ವಿಸ್ತರಣೆಯಾಗಿಲ್ಲ. ಕಳೆದ 50 ವರ್ಷಗಳಿಂದ ರಸ್ತೆ ವಿಸ್ತರಣೆ ಭರವಸೆಯಾಗಿಯೇ ಉಳಿದಿದ್ದು ಈಗ ವಿಸ್ತರಣೆ ವಿಷಯ ತಮಾಷೆಯ ಮಾತಾಗಿದೆ ಎನ್ನುತ್ತಾರೆ ಸ್ಥಳೀಯರಾದ ಸ್ಟೀವನ್‌ ಅಮನ್ನ.

Advertisement

ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರನ್ನು ಈ ಯೋಜನೆಯ ಭೂಸ್ವಾಧೀನ ಅಧಿಕಾರಿಯನ್ನಾಗಿ ಸರಕಾರ ನೇಮಿಸಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ 3ಎ, 3ಡಿ ನೋಟಿಫಿಕೇಶನ್‌ ಪ್ರಕ್ರಿಯೆ ಮುಗಿದು, 3ಜಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಎರಡು ಮೂರು ತಿಂಗಳೊಳಗೆ ಭೂಸ್ವಾಧೀನದ ಪ್ರಕ್ರಿಯೆಗಳು ನಡೆಯಲಿವೆ ಎಂದು ಹೆದ್ದಾರಿ
ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅನುದಾನ ಬಿಡುಗಡೆಯಾಗಿದೆ
ಮಲ್ಪೆ ರಾ. ಹೆ 169ಎ ವಿಭಾಗದ ಹೆಬ್ರಿ-ಮಲ್ಪೆ ಚತುಷ್ಪಥ ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿರುವ ಕರಾವಳಿ ಬೈಪಾಸ್‌ನಿಂದ
ಮಲ್ಪೆವರೆಗೂ ಭೂ ಸ್ವಾಧೀನಕ್ಕೆ ಸಂಬಂಧಿಸಿ 3ಜಿ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆಗೆ ಇನ್ನೂ ಕೆಲಸ ಬಾಕಿ ಇರುವುದರಿಂದ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಹಣ ಬಂದ ಕೂಡಲೇ ಕಾಮಗಾರಿಯ ಪ್ರಕ್ರಿಯೆ ನಡೆಯಲಿದೆ.
ಯಶ್‌ಪಾಲ್‌ ಎ. ಸುವರ್ಣ,
ಶಾಸಕರು ಉಡುಪಿ

ಸಮಸ್ಯೆ ಸರಿಪಡಿಸಿ
ಸಾರ್ವಜನಿಕರು ಟ್ರಾಫಿಕ್‌ ಕಿರಿಕಿರಿ ಮುಕ್ತಿಗೆ ರಸ್ತೆ ವಿಸ್ತರಣೆಗೆ ಒತ್ತಾಯಿಸುತ್ತಲೇ ಇದ್ದಾರೆ. ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಲು ಕಟ್ಟಡ ಮಾಲಕರೂ ಸಿದ್ಧರಾಗಿದ್ದರೂ, ರಸ್ತೆ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಅದ್ಯಾವಾಗ ರಸ್ತೆ ವಿಸ್ತರಣೆ ಆಗುತ್ತೋ ಕಾದು ನೋಡಬೇಕಿದೆ.
ಪಾಂಡುರಂಗ ಮಲ್ಪೆ, ಸಮಾಜ ಸೇವಕರು

*ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next