ಕುಂದಾಪುರ: ಅಪೌಷ್ಟಿಕತೆ ದೇಹಕ್ಕಷ್ಟೇ ಅಲ್ಲ ದೇಶಕ್ಕೂ ಶಾಪ. ಅದಕ್ಕಾಗಿ ಯಾವುದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕಾದ್ದು ಹೆತ್ತವರ ಕರ್ತವ್ಯ. ಹಾಗಂತ ಅದೆಷ್ಟೋ ಬಾರಿ ಬಡತನವೇ ಮೊದಲಾದ ಕಾರಣಗಳಿಂದ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗದ ಪೋಷಕರಿಗೆ ಸರಕಾರವೇ ಒದಗಿಸುತ್ತದೆ. ಪೋಷಣ್ ಅಭಿಯಾನ್ ಮೂಲಕ ಎಲ್ಲ ಗರ್ಭಿಣಿ, ಬಾಣಂತಿ, ಮಗುವಿಗೆ ಪೌಷ್ಟಿಕ ಆಹಾರ, ಅದರ ಮಾಹಿತಿ ನೀಡಲಾಗುತ್ತದೆ ಎಂದು ಉಪ ವಿಭಾಗ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.
ಮಂಗಳವಾರ ಇಲ್ಲಿನ ತಾ.ಪಂ. ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಅಪೌಷ್ಟಿಕ ಮಕ್ಕಳ ಹೆತ್ತವರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿ ಹೆತ್ತವರಲ್ಲಿ ಸರಿ ಯಾದ ಮಾಹಿತಿ ಇರುವ ಕಾರಣ ಅಪೌಷ್ಟಿಕತೆ ಅಂಶ ಕಡಿಮೆ ಇದೆ. ಇಲ್ಲಿ ಪಡೆದ ಮಾಹಿತಿ ಇನ್ನಷ್ಟು ಕಡೆ ಹೇಳುವ ಮೂಲಕ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗುವಂತೆ ಮಾಡಿ. ಅಪೌಷ್ಟಿಕ ಮಕ್ಕಳು ಮನೆಗೂ ಹೊರೆ, ದೇಶಕ್ಕೂ ಹೊರೆ, ಆರ್ಥಿಕತೆಗೂ ಹೊರೆ ಎಂಬ ಭಾವ ಬರದಂತೆ ಅಪೌಷ್ಟಿಕತೆ ಹೋಗಲಾಡಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ವೇತಾ, ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಒಟ್ಟು 18 ಮಕ್ಕಳಷ್ಟೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಇತರೆಡೆಗೆ ಹೋಲಿಸಿದರೆ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಅಷ್ಟರ ಮಟ್ಟಿಗೆ ಪೋಷಕರು ಜಾಗೃತರಾಗಿದ್ದಾರೆ. ಒಬ್ಬರೂ ಅಪೌಷ್ಟಿಕತೆಯಿಂದ ಬಳಲುತ್ತಿಲ್ಲ ಎಂದಾಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ತಹಶೀಲ್ದಾರ್ ಕಿರಣ್ ಗೌರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಉಪಸ್ಥಿತರಿದ್ದರು. ಅಂಗನ ವಾಡಿಗಳ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ವಂದಿಸಿದರು.