Advertisement

ಮಳೆಗೆ ಮಲೆನಾಡು ತತ್ತರ

11:15 PM Oct 25, 2019 | Lakshmi GovindaRaju |

ಬೆಂಗಳೂರು: ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಮಲೆನಾಡಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಕಡಿಮೆಯಾಗಿದ್ದರೂ, ಜಿನುಗುತ್ತಿರುವ ಮಳೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ, ಹಳೇ ಮೈಸೂರು ಭಾಗದಲ್ಲೂ ಮಳೆ ಮುಂದುವರಿದಿದ್ದು, ದೀಪಾವಳಿ ಹಬ್ಬದ ಸಡಗರಕ್ಕೆ ತಣ್ಣೀರೆರಚುತ್ತಿದೆ.

Advertisement

ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೋಟದಲ್ಲಿ ರಾಜ್ಯದಲ್ಲಿಯೇ ಅಧಿಕ, 15 ಸೆಂ.ಮೀ. ಮಳೆ ಸುರಿಯಿತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 29.2 ಡಿ.ಸೆ.ಮತ್ತು ಬೀದರ್‌ನಲ್ಲಿ ಕನಿಷ್ಠ 18 ಡಿ.ಸೆ.ತಾಪಮಾನ ದಾಖಲಾಯಿತು.

ಕಾಫಿನಾಡು ತತ್ತರ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ತುಂಗಾ, ಭದ್ರಾ ಸೇರಿ ಎಲ್ಲ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಮತ್ತೂಮ್ಮೆ ಪ್ರವಾಹದ ಭೀತಿ ಉಂಟಾಗಿದೆ. ಹೇಮಾವತಿ ನದಿಯ ಪ್ರವಾಹಕ್ಕೆ ಸಿಲುಕಿ ಬಂಕೇನಹಳ್ಳಿಯ ಕಾಲುಸಂಕ ಕೊಚ್ಚಿ ಹೋಗಿದೆ. ಜಾವಳಿ ಗ್ರಾಮದಲ್ಲಿ ಕಂಬವೊಂದು ಮುರಿದು ಬಿದ್ದಿದ್ದು, ಶಿಕ್ಷಕಿ ತಾರಾ ಎಂಬುವರು ಅಪಾಯದಿಂದ ಪಾರಾಗಿದ್ದಾರೆ.

ಹಲವೆಡೆ ಮನೆಗಳ ಹೆಂಚುಗಳೆಲ್ಲ ಹಾರಿ ಹೋಗಿವೆ. ಕೊಟ್ಟಿಗೆಹಾರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿದ್ದು, ಬಂದ್‌ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ತುಂಗಾನದಿಯ ಒಳಹರಿವು ಹೆಚ್ಚಾಗಿದೆ. ಸಾಗರ ತಾಲೂಕಿನ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಹೊಸನಗರ ಭಾಗದಲ್ಲಿ ರಜೆ ಕೊಡುವ ಅವಕಾಶವನ್ನು ಆಯಾ ಶಾಲಾ ಮುಖ್ಯಸ್ಥರಿಗೆ ನೀಡಿ ಬಿಇಒ ಆದೇಶಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ 2216 ಜನ ನಿರಾಶ್ರಿತ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದು, ಗುರುವಾರ ನಿಂತಿದ್ದ ಮಳೆ ಶುಕ್ರವಾರ ಮತ್ತೆ ಆರಂಭಗೊಂಡಿದೆ. ಹೀಗಾಗಿ, ಜನರಲ್ಲಿ ಮತ್ತೆ ಆತಂಕ ಒಡಮೂಡಿದೆ. ಈ ಮಧ್ಯೆ, ಮಲಪ್ರಭಾ ನದಿಯ ಪ್ರವಾಹದ ನೀರಿನಿಂದ ಜಲಾವೃತವಾಗಿದ್ದ ಜಿಲ್ಲೆಯ ಗದಗ-ಬಾದಾಮಿ ರಾಜ್ಯ ಹೆದ್ದಾರಿಯ ಚೋಳಚಗುಡ್ಡ ಸೇತುವೆ, ಕೊಣ್ಣೂರ-ಗೋವನಕೊಪ್ಪ ಮಧ್ಯದ ಕೊಣ್ಣೂರ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 2216 ಜನರು ನಿರಾಶ್ರಿತರಾಗಿದ್ದು, 6 ಪರಿಹಾರ ಕೇಂದ್ರ ತೆರೆಯಲಾಗಿದೆ.

Advertisement

ಹಳೇ ಮೈಸೂರು ಭಾಗದಲ್ಲೂ ಮಳೆ: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಸುರಿದ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡವು. ವಾಹನ ಸವಾರರು ಪರದಾಡುವಂತಾಯಿತು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ಕೊಟ್ಟಿಗೆಯೊಂದು ಕುಸಿದು ಬಿದ್ದಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಯಿಂದಾಗಿ ಚೆಕ್‌ಡ್ಯಾಂ ಮತ್ತು ಕೃಷಿ ಹೊಂಡಗಳಲ್ಲಿ ನೀರು ತುಂಬಿದೆ.

ಕರಾವಳಿಯಲ್ಲೂ ಮಳೆ: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್‌ ಚಂಡಮಾರುತದ ಪರಿ ಣಾಮ ಮಂಗಳೂರು, ಉಡುಪಿ ಸೇರಿ ಕರಾವಳಿ ಯಲ್ಲಿ ದಿನವಿಡೀ ಉತ್ತಮ ಮಳೆಯಾಯಿತು.

ಮರ ಬಿದ್ದು ಸಾವು: ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಕುಕ್ಕೆಹಳ್ಳಿಯಲ್ಲಿ ಗುರುವಾರ ರಾತ್ರಿ ಮರ ಉರುಳಿ ಬಿದ್ದು, ರಿಕ್ಷಾ ಚಾಲಕ ಶಾಂತನ್‌ಜಡ್ಡು ನಿವಾಸಿ ರವೀಂದ್ರ ಕುಲಾಲ್‌ (38) ಎಂಬು ವರು ಮೃತಪಟ್ಟಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠವಿರುವ ರಥಬೀದಿಯ ತಗ್ಗಿನಲ್ಲಿರುವ ಚಂದ್ರಮೌಳೀಶ್ವರ ದೇವಸ್ಥಾನದ ಒಳಗೆ ನೀರು ನುಗ್ಗಿತ್ತು.

ಶನಿವಾರ ಪದವಿ ಕಾಲೇಜುಗಳಿಗೂ ರಜೆ ಘೋಷಿಸಿರುವುದರಿಂದ ಮಂಗಳೂರು ವಿ.ವಿ.ಪರೀಕ್ಷೆ ಮುಂದೂಡಲಾಗಿದೆ. ಉಳ್ಳಾಲದ ಸಹೀಬುದ್ದೀನ್‌ ಯು.ಎಸ್‌.ಅವರಿಗೆ ಸೇರಿದ ಎಂ.ಎ.ಮಹೀಲ್‌ ಬೋಟ್‌ ತಾಂತ್ರಿಕ ತೊಂದರೆಯಿಂದಾಗಿ ಕಾರವಾರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಸಿಲುಕಿಕೊಂಡಿದ್ದು, 10 ಮಂದಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next