ಮುಂಬಯಿ/ಲಂಡನ್: ಒಂದೇ ಜೈಲಲ್ಲಿ ಇರಲಿದ್ದಾರೆ ವಿಜಯ ಮಲ್ಯ ಮತ್ತು ನೀರವ್ ಮೋದಿ. ಇದೇನು ಅಚ್ಚರಿ ಎಂದು ಕೊಳ್ಳಬೇಡಿ. ಸದ್ಯ ಲಂಡನ್‌ನಲ್ಲಿ ತಲೆಮರೆಸಿ ಕೊಂಡಿರುವ ಇಬ್ಬರು ಉದ್ಯಮಿಗಳು ಭಾರತಕ್ಕೆ ಗಡೀಪಾರು ಆದರೆ, ಮುಂಬಯಿನ ಅರ್ಥರ್ ರಸ್ತೆಯಲ್ಲಿರುವ ಕಾರಾಗೃಹದಲ್ಲಿರುವ 12ನೇ ನಂಬರ್‌ನ ಬ್ಯಾರೆಕ್‌ನಲ್ಲಿ ಇರಲಿದ್ದಾರೆ.
ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿ ರುವ ವಿಜಯ ಮಲ್ಯ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿದ ನೀರವ್ ಮೋದಿಯನ್ನು ಇರಿಸಬೇಕಾಗಿರುವ ಜೈಲಿನ ಮಾಹಿತಿಯನ್ನು ಅಧಿಕಾರಿಗಳು ಮಹಾರಾಷ್ಟ್ರದ ಗೃಹ ಇಲಾಖೆಗೆ ನೀಡಿದ್ದಾರೆ. ಉದ್ಯಮಿ ವಿಜಯ ಮಲ್ಯ ವಿಚಾರಣೆ ವೇಳೆ ಕೂಡ ಕಾರಾಗೃಹದಲ್ಲಿ ಯಾವ ರೀತಿಯ ವ್ಯವಸ್ಥೆ ಇರಲಿದೆ ಎಂಬ ಬಗ್ಗೆ ಲಂಡನ್ ಕೋರ್ಟ್ ದಾಖಲೆಗಳನ್ನು ಕೇಳಿದಾಗ ಸಲ್ಲಿಸಲಾಗಿತ್ತು.
ಏನೇನು ಸಿಗಲಿದೆ?: ಒಂದು ವೇಳೆ ನೀರವ್ ಮೋದಿ ಗಡೀಪಾರು ಆಗಿ ಆರ್ಥರ್ ರಸ್ತೆಯ ಜೈಲಲ್ಲಿ ಇರಿಸಲ್ಪಟ್ಟರೆ ಆತನಿಗೆ ಐರೋಪ್ಯ ಶೈಲಿಯಲ್ಲಿ ಮೂರು ಹೊತ್ತಿನ ಊಟ, ಶುದ್ಧ ಕುಡಿವ ನೀರು, ವೈಯಕ್ತಿಕ ವಸ್ತುಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಜತೆಗೆ ಪ್ರತಿದಿನ ಬೆಳಗ್ಗೆ ಗರಿಷ್ಠವೆಂದರೆ 1 ಗಂಟೆ ಕಾಲ ಸೆಲ್‌ನಿಂದ ಹೊರಬಂದು ವ್ಯಾಯಾಮ ಮತ್ತು ಇತರ ದೈಹಿಕ ಕಸರತ್ತುಗಳನ್ನು ನಡೆಸಲು ಅವಕಾಶ ನೀಡಲಾಗುತ್ತದೆ.
ಮಲಗುವ ವ್ಯವಸ್ಥೆ: ಹತ್ತಿಯಿಂದ ಸಿದ್ಧಪಡಿಸಲಾ ಗಿರುವ ಮ್ಯಾಟ್, ತಲೆದಿಂಬು, ಹೊದ್ದುಕೊಂಡು ಮಲಗಲು ಬಟ್ಟೆ, ಬ್ಲಾಂಕೆಟ್ ನೀಡಲಾಗುತ್ತದೆ ಎಂದು ಮಹಾರಾಷ್ಟ್ರದ ಗೃಹ ಖಾತೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತಮ ಬೆಳಕು: ನೀರವ್ ಮೋದಿ 20×15 ಅಡಿಯ ಸೆಲ್‌ನಲ್ಲಿ ಇರಲಿದ್ದಾನೆ. ಸೆಲ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಳಿ, ಬೆಳಕು ಇರಲಿದೆ. ನಿಯಮಿತ ವೈದ್ಯಕೀಯ ತಪಾಸಣೆ, ಉತ್ತಮ ದರ್ಜೆಯ ಶೌಚಾಲಯ, ಬಟ್ಟೆ ಒಗೆಯುವ ಸೌಲಭ್ಯಗಳನ್ನು ನೀಡ ಲಾಗುತ್ತದೆ. ಇದರ ಜತೆಗೆ ಯಾವುದೇ ಪರಿ ಸ್ಥಿತಿ ಎದುರಿಸಲು ಸಾಮರ್ಥ್ಯ ಇರುವ ಪೊಲೀಸ ರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ.
ಮೂರನೇ ಬಾರಿಗೆ ಅರ್ಜಿ: ಇದೇ ವೇಳೆ ಲಂಡನ್ ಜೈಲಲ್ಲಿರುವ ಉದ್ಯಮಿ ನೀರವ್ ಮೋದಿ ಮೂರನೇ ಬಾರಿ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಇದರ ವಿಚಾರಣೆ ಆರಂಭವಾಗಿದೆ.