Advertisement

ಡಿ. 22: ಸುಂದರ ವಿನ್ಯಾಸದ ಮಲ್ಲಿಕಟ್ಟೆ ವೃತ್ತ ಉದ್ಘಾಟನೆ

03:55 AM Dec 21, 2018 | Karthik A |

ಮಹಾನಗರ: ಮಂಗಳೂರಿನ ಪ್ರತಿಷ್ಠಿತ ಭಂಡಾರಿ ಬಿಲ್ಡರ್ ಅಭಿವೃದ್ಧಿಪಡಿಸಿರುವ ಮಲ್ಲಿಕಟ್ಟೆ ವೃತ್ತ ಡಿ. 22ರಂದು ಲೋಕಾರ್ಪಣೆಗೊಳ್ಳಲಿದೆ. ಸಂಜೆ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಮೇಯರ್‌ ಭಾಸ್ಕರ್‌ ಕೆ. ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ವೃತ್ತ ಉದ್ಘಾಟನೆಗೊಳ್ಳಲಿದೆ. ಈ ವೃತ್ತವನ್ನು ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌ ) ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಂಡಾರಿ ಬಿಲ್ಡರ್ ಈಗಾಗಲೇ ಬಿಜೈಯಲ್ಲಿ ವಿವೇಕಾನಂದ ಪಾರ್ಕ್‌ ನಿರ್ಮಿಸಿದೆ. ಕದ್ರಿ ರಸ್ತೆ ವೃತ್ತದಲ್ಲಿ ವಿಶೇಷ ರೀತಿಯ ಕಾರಂಜಿ ರೂಪಿತ ವೃತ್ತದ ಕಲಾಕೃತಿ, ಮಲ್ಲಿಕಟ್ಟೆ ಸಮೀಪದಲ್ಲಿ ಪರಿಸರ ಉಳಿಸುವ ಹಾಗೂ ಜಾಗೃತಿ ಮೂಡಿಸುವ ಅಪೂರ್ವ ಕೈಆಕಾರದ ಕಲಾಕೃತಿಯನ್ನು ನಿರ್ಮಿಸಿದೆ ಎಂದು ಭಂಡಾರಿ ಬಿಲ್ಡರ್ನ ಪ್ರವರ್ತಕ ಲಕ್ಷ್ಮೀಶ ಭಂಡಾರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸುಮಾರು 21 ಲಕ್ಷ ರೂ. ವೆಚ್ಚದಲ್ಲಿ ವೃತ್ತವನ್ನು ಅಭಿವೃದ್ಧಿಪಡಿಸಲಾಗಿದೆ. ತುಳುನಾಡಿನ ಪಂಜುರ್ಲಿ ಪಾಡ್ದನ, ಯಕ್ಷಕಲೆ, ದ್ರಾವಿಡ ಭಾಷೆ, ಮಲಯಾಳದ ಸಾಹಿತ್ಯ, ಕವಿ ರತ್ನಾಕರವರ್ಣಿ, ಕುಮಾರವ್ಯಾಸ ಅವರ ಐತಿಹಾಸಿಕ ಉಲ್ಲೇಖ ಇದರಲ್ಲಿದೆ. ಕಲ್ಲಿನ ಶಿಲಾ ಮಂಟಪ ಹಾಗೂ ಅಂದವಾಗಿ ಕಾಣಲು ಲೈಟ್‌, ಹಸಿರು ಹೊದಿಕೆ, ಹೂ-ಗಿಡ ಮುಂತಾದವುಗಳನ್ನು ಸೇರಿಸಲಾಗಿದೆ ಎಂದು ಸಲಹೆಗಾರ ವೇಣು ಶರ್ಮಾ ವಿವರಿಸಿದರು.
 
ಮಂಗಳೂರಿನ ದಾನಿಗಳು ಹಾಗೂ ವ್ಯವಹಾರಿ ಸಂಸ್ಥೆಗಳು ಮಂಗಳೂರಿನ ವೃತ್ತ, ಪಾರ್ಕ್‌, ಬಸ್‌ ನಿಲ್ದಾಣ ಮುಂತಾದ ಸೌಲಭ್ಯ ನಿರ್ಮಾಣ ಮತ್ತು ಅಭಿವೃದ್ಧಿಗೆ ಸಹಾಯ ಮಾಡಿದಲ್ಲಿ ನಗರದ ಸ್ಮಾರ್ಟ್‌ ಸಿಟಿ ಕಲ್ಪನೆ ಸಾಕಾರ ದೂರ ಇಲ್ಲ ಎಂದು ಕಾರ್ಪೊರೇಟರ್‌ ಅಶೋಕ್‌ ಡಿ.ಕೆ. ವಿವರಿಸಿದರು. ವೃತ್ತದ ಕಲಾಕೃತಿ ರಚಿಸಿದ ಕಲಾವಿದ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು. 

ಸುಂದರ ವಿನ್ಯಾಸ
ಲಕ್ಷ್ಮೀಶ ಭಂಡಾರಿಯವರ ಆಶಯದಂತೆ ಸೂರ್ಯನ ಬೆಳಕಿನ ತತ್ವದೊಂದಿಗೆ ತುಳುನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯಾಧಾರಿತ ಉಲ್ಲೇಖಗಳೊಂದಿಗೆ, ವಿವಿಧ ಲೋಹಗಳನ್ನೊಳಗೊಂಡ ಕಲಾಕೃತಿಯನ್ನು ಆಕಾಶ ತತ್ವಕ್ಕೆ ತೆರೆದುಕೊಂಡಂತೆ ರಚಿಸಲಾಗಿದೆ ಎಂದು ವೃತ್ತದ ಕಲಾಕೃತಿಯನ್ನು ರಚಿಸಿದ ಕಲಾವಿದ ರಾಜೇಂದ್ರ ಕೇದಿಗೆ ವಿವರಿಸಿದರು. ಶಿಲಾ ಮಂಟಪದ ಕೆಲಸವನ್ನು ಕಾರ್ಕಳದ ವಿಜಯ ಶಿಲ್ಪ ಶಾಲೆಯ ಸತೀಶ್‌ ಆಚಾರ್ಯ ನಡೆಸಿದ್ದು ತುಳು ಹಾಗೂ ಇತರ ಸಾಹಿತ್ಯ ಉಲ್ಲೇಖಗಳನ್ನು ತುಳು ಅಧ್ಯಯನ ಕೇಂದ್ರದ ಡಾ| ಸಾಯಿಗೀತ ಹೆಗ್ಡೆ ಹಾಗೂ ನಮ್ಮ ತುಳುನಾಡು ಟ್ರಸ್ಟ್‌ನ ಜಿ.ವಿ.ಎಸ್‌. ಉಳ್ಳಾಲ್‌ ನೀಡಿದ್ದಾರೆ. ಲೋಹದ ಕಲಾಕೃತಿಯನ್ನು ಮಂಗಳೂರಿನ ಕಲಾವಿದ ಮಹಮ್ಮದ್‌ ಇಮ್ರಾನ್‌ ಮಾಡಿದ್ದು ಒಟ್ಟು ಎಂಜಿನಿಯರ್‌ ನಕ್ಷೆಯನ್ನು ಗೋಕುಲ್‌ ರಾಜ್‌ ನೀಡಿದ್ದಾರೆ ಎಂದು ವೇಣು ಶರ್ಮ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next