ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ವಿಪಕ್ಷ ನಾಯಕ ಹುದ್ದೆ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಗೆ ಬಲ ತುಂಬಲು ಹೈಕಮಾಂಡ್ ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕರಾಗಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ಇದ್ದಾರೆ. ಈಗ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಹುದ್ದೆಗೆ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಸಂಕಲ್ಪ ಯಾತ್ರೆಗಳ ಮೂಲಕ ಪಕ್ಷ ಸಂಘಟನೆಗೆ ಹೊರಟಿರುವ ಸಂದರ್ಭದಲ್ಲಿಯೇ ಖರ್ಗೆ ಅವರಿಗೆ ಸ್ಥಾನಮಾನ ನೀಡಿರುವುದು ಪಕ್ಷ ಸಂಘಟನೆಗೆ “ಟಾನಿಕ್’ ಸಿಕ್ಕಂತಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ – ಈ ತ್ರಿಮೂರ್ತಿಗಳ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಕಾರ್ಯತಂತ್ರವನ್ನು ಹೈಕಮಾಂಡ್ ರೂಪಿಸಿದೆ. ಈ ನಿಟ್ಟಿನಲ್ಲಿ ಖರ್ಗೆ ಅವರಿಗೆ ವಿಪಕ್ಷ ನಾಯಕ ಹುದ್ದೆ ನೀಡಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ದಲಿತ ಎಡಗೈ ಸಮುದಾಯದ ನಾಯಕ ಕೆ.ಎಚ್. ಮುನಿಯಪ್ಪ ಅವರಿಗೆ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಯೂಸಿ) ಖಾಯಂ ಆಹ್ವಾನಿತ ಹುದ್ದೆ ನೀಡಲಾಗಿತ್ತು. ಮತ್ತೂಬ್ಬ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರಿಗೆ ಎಐಸಿಸಿ ಕಾರ್ಯದರ್ಶಿ ಹುದ್ದೆ ನೀಡಿ ಮಹಾರಾಷ್ಟ್ರ ಉಸ್ತುವಾರಿ ವಹಿಸಲಾಗಿತ್ತು.
ಈಗಾಗಲೇ ದಲಿತ ಬಲಗೈ ಸಮುದಾಯದ ಧ್ರುವನಾರಾಯಣ್, ರೆಡ್ಡಿ ಸಮುದಾಯದ ರಾಮಲಿಂಗಾ ರೆಡ್ಡಿ, ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಇವೆಲ್ಲವೂ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಹೈಕಮಾಂಡ್ ಕೈಗೊಂಡ ತೀರ್ಮಾನಗಳೇ ಆಗಿದ್ದವು.
ಖರ್ಗೆ ವಿಪಕ್ಷ ನಾಯಕ :
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನ ಒಲಿದಿದೆ. ಫೆ. 15ರಂದು ಹಾಲಿ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ನಿವೃತ್ತಿಯಾಗಲಿದ್ದು, ಇವರ ಸ್ಥಾನವನ್ನು ಖರ್ಗೆ ತುಂಬಲಿದ್ದಾರೆ. ಮೋದಿ ಸರಕಾರ 1ರ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಖರ್ಗೆ ಸರಕಾರವನ್ನು ಹಲವಾರು ಬಾರಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಈಗ ರಾಜ್ಯಸಭೆಯಲ್ಲೂ ಇದೇ ಉದ್ದೇಶ ಇರಿಸಿಕೊಂಡು ಖರ್ಗೆ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಪಕ್ಷ ವಹಿಸಿದ ಜವಾಬ್ದಾರಿ ನಿರ್ವಹಣೆ ಮೂಲಕ “ನಿಷ್ಠಾವಂತ’ರಾಗಿರುವ ಖರ್ಗೆ ಅವರು ರಾಜ್ಯಸಭೆ ವಿಪಕ್ಷ ನಾಯಕರಾಗಿರುವುದು ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ. ಅವರ ಆಯ್ಕೆ ರಾಜ್ಯದ ನಾಯಕರಿಗೆ ಹೈಕಮಾಂಡ್ ನೀಡಿರುವ ಗೌರವ.
–ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ