ಬೆಂಗಳೂರು: ಎಪ್ಪತ್ತೈದು ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಒಂದೆಡೆ ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ಈ ಮಧ್ಯೆ ಎಂಬತ್ತು ವರ್ಷ ಪೂರೈಸುತ್ತಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಜನ್ಮದಿನ ಆಚರಿಸದಂತೆ ಪತ್ರ ಬರೆದಿದ್ದಾರೆ.
ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಪತ್ರ ಬರೆದಿರುವ ಅವರು, ಜುಲೈ 21ಕ್ಕೆ ನನಗೆ 80 ವರ್ಷವಾಗುತ್ತದೆ. ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗುತ್ತದೆ. ಅಂದು ಸದನ ಚಾಲ್ತಿಯಲ್ಲಿರುವ ಜತೆಗೆ ಕಾಂಗ್ರೆಸ್ ಪಕ್ಷದ ತ್ಯಾಗದ ಪ್ರತಿರೂಪ ಸೋನಿಯಾ ಗಾಂಧಿಯವರ ಇಡಿ ವಿಚಾರಣೆ ಅಗ್ನಿ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಅವರ ಜತೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ನಾನೇನು ಕಾವಿ ತೊಟ್ಟಿಲ್ಲ; ಸಿಎಂ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್
ಅಂದು ನಾನು ಬೆಂಗಳೂರು ಅಥವಾ ಕಲಬುರ್ಗಿಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಹುಟ್ಟು ಹಬ್ಬ ಆಚರಣೆ ಬೇಡ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿ ಇದಕ್ಕೆ ಬೇರೆಯದೇ ವ್ಯಾಖ್ಯಾನವಾಗುತ್ತಿದೆ. ಸಿದ್ದರಾಮೋತ್ಸವ ಆಚರಣೆಯ ಉತ್ಸಾಹದಲ್ಲಿ ಇರುವ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡುವುದಕ್ಕೆ ಖರ್ಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.