ಕಲಬುರಗಿ: ರಾಜ್ಯಸಭೆಯ ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ.
“ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಯಾವುದೇ ರೋಗಲಕ್ಷಣಗಳಿಲ್ಲ. ಮತ್ತು ವೈದ್ಯರ ಸಲಹೆ ನೀಡಿದಂತೆ ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಪಾಸಿಟಿವ್ ಬಂದಿರುವ ಬಗ್ಗೆ ಕಾರ್ಯದರ್ಶಿ ಹೇಳಿಕೆ ಬಿಡುಗಡೆ ಮಾಡಿದ್ದು, ಜ.12ರಂದು ಆರ್ ಟಿ ಪಿಸಿಆರ್ ಟೆಸ್ಟ್ ನಲ್ಲಿ ಖರ್ಗೆ ಅವರಿಗೆ ಪಾಸಿಟಿವ್ ಪತ್ತೆಯಾಗಿದೆ. ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೆಯ ಡೋಸ್ ಪಡೆದ ನಂತರ 9 ತಿಂಗಳು ಅವಧಿ ಪೂರ್ಣಗೊಳಿಸಬೇಕಾಗಿರುವುದರಿಂದ ಅವರು ಇನ್ನೂ ಬೂಸ್ಟರ್ ಡೋಸ್ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿ ಕಚೇರಿಯ ಕಾರ್ಯದರ್ಶಿಗಳಿಗೆ ಸೇರಿದಂತೆ ಐವರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರೆಲ್ಲ ಹೋಂ ಐಸೋಲೇಷನ್‌ನಲ್ಲಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ. ಜತೆಗೆ ಕಳೆದೆರಡು ದಿನಗಳಿಂದ ಖರ್ಗೆ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಲಾಗಿದೆ ಎಂದು ಕಾರ್ಯದರ್ಶಿಗಳು ತಮ್ಮ ಹೇಳಿಕೆ ತಿಳಿಸಿದ್ದಾರೆ.
ಬುಧವಾರ ರಾತ್ರಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರಿಗೂ ಕೋವಿಡ್ ಸೋಂಕು ದೃಢವಾಗಿದೆ. ಈ ಇಬ್ಬರೂ ನಾಯಕರು ರಾಜ್ಯದಲ್ಲಿ ನಡೆಯುತ್ತಿದ್ದ ಮೇಕೆದಾಟು ಪಾದಯಾತ್ರೆಯ ಮೊದಲ ದಿನ ಭಾಗವಹಿಸಿದ್ದರು.