ಕಲಬುರಗಿ: ಪಂಜಾಬ್ ನಲ್ಲಿ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು ಕಾಂಗ್ರೆಸ್ ನ ದಿಟ್ಟ ನಿರ್ಧಾರ. ಇಂತಹ ತೀರ್ಮಾನ ತೆಗೆದುಕೊಂಡ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಸುವುದು ಇಂದಿನ ಅಗತ್ಯ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮತಗಳನ್ನು ಸೆಳೆಯಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡುತ್ತೇವೆ. ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುವವರೇ ಹೆಚ್ಚು. ಆದರೆ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಪಂಜಾಬ್ ನಲ್ಲಿ ದಲಿತ ವ್ಯಕ್ತಿ ಚರಣ್ ಜೀತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಮ್ಮ ನಾಯಕರು ಇಟ್ಟ ದಿಟ್ಟ ಹೆಜ್ಜೆಯಾಗಿದೆ ಎಂದರು.
ಇದನ್ನೂ ಓದಿ:ಭವಾನಿಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿ: ದೀದಿ ಸಿಎಂ ಪಟ್ಟಕ್ಕಿಲ್ಲ ಅಡ್ಡಿ
ದಲಿತ ವ್ಯಕ್ತಿ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದನ್ನು ನಾನು ಸ್ವಾಗತಿಸುತ್ತೇನೆ. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಧೈರ್ಯದಿಂದಾಗಿದೆ. ಅಲ್ಲದೇ, ಇದರಿಂದಾಗಿ ದೇಶಕ್ಕೆ ಒಂದು ಸಂದೇಶ ತಲುಪಿದೆ. ಆದರೆ, ಇದನ್ನೂ ಹೇಗೆ ಹಾಳು ಮಾಡಬೇಕೆಂಬ ಕುತಂತ್ರದಲ್ಲಿ ವಿರೋಧಿಗಳು ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕದಲ್ಲೂ ಪಂಜಾಬ್ ಮಾದರಿ ಆಗಬೇಕೆಂಬ ಕೆಪಿಪಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಪರಮೇಶ್ವರ್ ಅವರು ಏನು ಹೇಳಿದ್ದಾರೋ ಅದನ್ನು ಅವರನ್ನೇ ಹೇಳಿ. ಕರ್ನಾಟಕದಲ್ಲಿ ಎಲ್ಲರೂ ಒಂದಾಗಿ ಪಕ್ಷ ಸಂಘಟಿಸಿ, ಪಕ್ಷವನ್ನು ಅಧಿಕಾರ ತರಬೇಕು. ನಂತರ ಈ ಬಗ್ಗೆ ಶಾಸಕರು, ಹೈಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ. ಆದರೆ, ಒಂದು ಮಾತ್ರ ನಿಜ, ಸಮಯ ಮತ್ತು ಸಂದರ್ಭ ಬಂದಾಗ ರಾಹುಲ್ ಗಾಂಧಿ ಎಂದೂ ಹಿಂದೇಟು ಹಾಕಲ್ಲ. ಅವರು ಮಾತು ಕೊಟ್ಟರೆ ಅದನ್ನು ಮಾಡಿ ತೋರಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಜನಾದೇಶ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನ ತಮ್ಮ ಆದೇಶ ನೀಡಿದ್ದಾರೆ. 27 ಸ್ಥಾನ ಗೆದ್ದು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಅಧಿಕಾರ ಹಿಡಿಯಲು ನಾವು ಜೆಡಿಎಸ್ ಬೆಂಬಲ ಕೋರಿದ್ದೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು