ಅತ್ಯಾಧುನಿಕ ಕಸಾಯಿಖಾನೆ, ಕುರಿ, ಕೋಳಿ ಮಾಂಸ ಮಾರಾಟಕ್ಕೆ ಪ್ರತ್ಯೇಕ ವಲಯ ಪ್ರಾರಂಭಿಸಬೇಕು ಎಂದು ಕರ್ನಾಟಕ ಕುಕ್ಕುಟ ಸಹಕಾರ ಮಹಾಮಂಡಳ ಸದಸ್ಯ ಮಲ್ಲಾಪುರ
ದೇವರಾಜ್ ಒತ್ತಾಯಿಸಿದ್ದಾರೆ.
Advertisement
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಕ್ಕುಟೋದ್ಯಮ ಹಲಾಲ್, ಜಟ್ಕಾ ಕಟ್ ವಿವಾದದಿಂದ ನಲುಗುತ್ತಿದೆ. ಹಲಾಲ್, ಜಟ್ಕಾ ಕಟ್, ಧರ್ಮದ ಹೆಸರಲ್ಲಿ ಸುಖಾಸುಮ್ಮನೆ ಅಶಾಂತಿ ಉಂಟು ಮಾಡಲಾಗುತ್ತಿದೆ. ಯಾರೋ ಹಲಾಲ್, ಜಟ್ಕಾ ಕಟ್ ಬಗ್ಗೆ ಚರ್ಚಿಸುತ್ತಾರೆ. ನೇರವಾಗಿ ಸಮಸ್ಯೆ ಆಗುತ್ತಿರುವುದು ಕುಕ್ಕುಟೋದ್ಯಮಿಗಳಿಗೆ ಎಂದು ಅಳಲು ತೋಡಿಕೊಂಡರು.
ಬಗ್ಗೆ ಚರ್ಚೆ ಮಾಡುವುದು, ಒಂದು ರೀತಿಯ ಫರ್ಮಾನಿನಂತೆ ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಹಲಾಲ್, ಜಟ್ಕಾ ಕಟ್ ಸಮಸ್ಯೆ ಬೇಡ ಎನ್ನುವುದಾದರೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅತ್ಯಾಧುನಿಕ, ಸುಸಜ್ಜಿತ ಕಸಾಯಿಖಾನೆ ಪ್ರಾರಂಭಿಸಬೇಕು.
ಅಲ್ಲಿ ಮಾಂಸ ಸಂಸ್ಕರಣೆಗೆ ಅವಕಾಶ ಮಾಡಿಕೊಡುವುದರಿಂದ ಹಲಾಲ್, ಜಟ್ಕಾ ಕಟ್ ಸಮಸ್ಯೆ ಉದ್ಭವವಾಗುವುದೇ ಇಲ್ಲ. ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವಂತೆ ಕುರಿ,
ಕೋಳಿ ಮಾಂಸ ಮಾರಾಟಕ್ಕೆ ಪ್ರತ್ಯೇಕ ವಲಯ ನಿರ್ಮಾಣ ಮಾಡಿದಲ್ಲಿ ವ್ಯಾಪಾರಸ್ಥರು ಬಂದು ನೇರವಾಗಿ ಗ್ರಾಹಕರಿಗೆ ಕುರಿ, ಕೋಳಿ ಮಾಂಸ ಮಾರಾಟ ಮಾಡುವರು. ಅದರಿಂದ ಜನರಿಗೆ,
ಕುಕ್ಕುಟೋದ್ಯಮಿಗಳಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
Related Articles
Advertisement
ಮೊದಲಿನಿಂದಲೂ ಕೋಳಿ, ಕುರಿ ಮಾಂಸ ಬಳಕೆ ನಡೆದೇ ಇತ್ತು. ಹಲಾಲ್, ಜಟ್ಕಾ ಕಟ್ ಗೊತ್ತೇ ಇರಲಿಲ್ಲ. ಈಗ ನಿರ್ಮಾಣವಾಗಿರುವ ಹಲಾಲ್, ಜಟ್ಕಾ ಕಟ್ ವಿವಾದದಿಂದ ಕೋಳಿ ಸಾಕಾಣಿಕೆ ರೈತರು ಕೋಳಿ ಮಾರಾಟ ಮಾಡಲಾಗುತ್ತಿಲ್ಲ. ಜನರು ಮುಕ್ತವಾಗಿ ಮಾರುಕಟ್ಟೆಗೆ ಬರದಂತಾಗಿದೆ. 45 ರೂಪಾಯಿಗೆ ಕೋಳಿ ಮರಿ ಖರೀದಿ ಮಾಡಿ ಒಂದು ಕೆಜಿ ಮಾಂಸದ ಕೋಳಿ ಮಾಡುವುದಕ್ಕೆ 200 ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ರೈತರು ನಷ್ಟಕ್ಕೆ ಒಳಗಾಗುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕೋಳಿ ಸಾಕಾಣಿಕೆ ರೈತರು ಅನುಭವಿಸುತ್ತಿರುವ ನಷ್ಟಕ್ಕೆ ಹೊಣೆಗಾರರು ಯಾರು ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಬಹಳ ದಿನಗಳಿಂದಲೂ ಕೋಳಿ ಮಾಂಸ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ಜನಪ್ರತಿನಿಧಿಗಳು,ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ದೂರಿದರು. ಕೋಳಿ ಸಾಕಾಣಿಕೆ ರೈತರಾದ ಐಗೂರು ಶಿವಮೂರ್ತಿ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.