ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ್ದನ್ನು ಟೀಕಿಸುತ್ತಿರುವ ಕಾಂಗ್ರೆಸ್ ದುರುದ್ದೇಶಪೂರಿತ ರಾಜಕೀಯ ದಾಳಿ ಆರಂಭಿಸುವ ಮೂಲಕ ತನ್ನ ಹಳೆಯ ಆಟ ಪುನರಾವರ್ತಿಸುತ್ತಿದೆ ಎಂದು ಬಿಜೆಪಿ ವಕ್ತಾರರೂ ಆಗಿರುವ ಶಾಸಕ ಎಸ್.ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ದಲಿತ ಸಮುದಾಯ ಒಲವು ವ್ಯಕ್ತಪಡಿಸುತ್ತಿರುವುದರಿಂದ ಹತಾಶೆಗೊಳಗಾಗಿ ಕಾಂಗ್ರೆಸ್ ಈ ರೀತಿ ಕ್ಷುಲ್ಲಕ ಟೀಕೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಉಪಾಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಮತ್ತು ಅವರೆಲ್ಲರಿಗೂ ಆಗ ಅಡುಗೆ ಸಿದ್ಧಪಡಿಸಲು ಸಾಧ್ಯವಾಗದೇ ಇರುವುದರಿಂದ ಹೋಟೆಲ್‌ನಿಂದ ಉಪಾಹಾರ ತರಿಸಿ ನೀಡಲಾಯಿತು ಎಂದು ಯಡಿಯೂರಪ್ಪ ಮತ್ತಿತರರಿಗೆ ಉಪಹಾರ ಬಡಿಸಿದ ದಲಿತ ಕುಟುಂಬದವರೇ ಹೇಳಿದ್ದಾರೆ.
ಮೇಲಾಗಿ ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಉಪಾಹಾರ ಸೇವಿಸುವುದರ ಹಿಂದೆ ಇರುವ ಉದ್ದೇಶ ಮುಖ್ಯವೇ ಹೊರತು ಅವರು ಮನೆಯಲ್ಲಿ ಅಡುಗೆ ಮಾಡಿ ಬಡಿಸಿದರೇ ಅಥವಾ ಹೋಟೆಲ್‌ನಿಂದ ತರಿಸಿಕೊಟ್ಟರೇ ಎಂಬುದು ಮುಖ್ಯ ವಲ್ಲ. ಆದರೆ, ಬಿಜೆಪಿ ಬಗ್ಗೆ ಮಾತನಾಡಲು ಯಾವುದೇ ಸ್ಪಷ್ಟ ಮತ್ತು ಅರ್ಥಪೂರ್ಣ ವಿಷಯ ಇಲ್ಲದ ಕಾರಣ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ್ದನ್ನೇ ಟೀಕಿ ಸುವ ಮೂಲಕ ಅಸಹ್ಯಕರ ಮತ್ತು ಅಗ್ಗದ ಪ್ರಚಾರದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಅಷ್ಟಕ್ಕೂ ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ತಿಂದಿದ್ದು ಇಡ್ಲಿ, ವಡೆ ಮಾತ್ರವೇ ಹೊರತು ಒಬ್ಬಟ್ಟು, ಫೇಣಿ ತರಿಸಿಕೊಂಡು ತಿನ್ನಲಿಲ್ಲ. ಯಡಿಯೂರಪ್ಪ ಅವರ ಈ ಕಾರ್ಯಕ್ರಮದ ಉದ್ದೇಶ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್‌ನರು, ದಲಿತರ ಮನೆಯ ಊಟವನ್ನು ಬಿಜೆಪಿಯವರು ತಿನ್ನಲಿಲ್ಲ ಎಂಬ ವಿಚಾರ ಮುಂದಿರಿಸಿಕೊಂಡು,
-ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ. ಕಳೆದ ಏಳು ದಶಕಗಳಿಂದ ದಲಿತ ಸಮುದಾಯವನ್ನು ವೋಟ್‌ಬ್ಯಾಂಕ್ ಮಾಡಿಕೊಂಡು ಆ ಸಮುದಾಯದ ಅಭಿವೃದ್ಧಿ ಕಡೆಗಣಿಸಿದ ಕಾಂಗ್ರೆಸ್‌ಗೆ ದಲಿತರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.