Advertisement

ಮಲೆನಾಡಿನಲ್ಲಿ “ಮಾಲ್ಗುಡಿ ಮ್ಯೂಸಿಯಂ’ಮೋಡಿ!

11:28 PM Sep 18, 2019 | Lakshmi GovindaRaju |

ಶಿವಮೊಗ್ಗ: ಮಾಲ್ಗುಡಿ ಡೇಸ್‌ 80ರ ದಶಕದ ಹಿಟ್‌ ಧಾರಾವಾಹಿ. ಆರ್‌.ಕೆ.ನಾರಾಯಣರ ಬರವಣಿಗೆಗೆ ಜೀವ ತುಂಬಿದ್ದೇ ಈ ಮಲೆನಾಡಿನ ಪರಿಸರ. ಈ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಈಗ “ಮಾಲ್ಗುಡಿ ಮ್ಯೂಸಿಯಂ’ ಸಿದ್ಧಗೊಳ್ಳುತ್ತಿದೆ.

Advertisement

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ರೈಲು ನಿಲ್ದಾಣದಲ್ಲಿ ಈ ಮ್ಯೂಸಿಯಂ ಸಿದ್ಧಗೊಳ್ಳುತ್ತಿದ್ದು, ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳ್ಳಲಿದೆ. ಕಥೆಗೆ ತಕ್ಕಂತೆ ಮಲೆನಾಡಿನ ಹಳ್ಳಿಗಳಲ್ಲಿ ಸೆಟ್‌ ಹಾಕಲಾಗಿತ್ತು. ಅರಸಾಳು ರೈಲು ನಿಲ್ದಾಣವನ್ನು “ಮಾಲ್ಗುಡಿ ಡೇಸ್‌’ ಎಂದು ಮರು ನಾಮಕರಣ ಮಾಡಿ ಚಿತ್ರೀಕರಣಕ್ಕೆ ಬಳಸಲಾಗಿತ್ತು. ಜತೆಗೆ ಮೇಗರವಳ್ಳಿ, ಆಗುಂಬೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜನರಿಗೆ “ಮಾಲ್ಗುಡಿ ಡೇಸ್‌’ ಮತ್ತೂಮ್ಮೆ ಕುತೂಹಲ ಮೂಡಿಸುತ್ತಿದೆ.

ಚಿತ್ರೀಕರಣದಲ್ಲಿ ಬಳಕೆ ಮಾಡಿದ್ದ ಕಟ್ಟಡವನ್ನೇ ದುರಸ್ತಿಗೊಳಿಸಿ ಸಿದ್ಧಗೊಳಿಸಲಾಗುತ್ತಿದೆ. ಧಾರಾವಾಹಿ ಯಲ್ಲಿ ಕಲಾವಿದನಾಗಿ ಕೆಲಸ ಮಾಡಿದ್ದ ಜಾನ್‌ ದೇವರಾಜ್‌ ಅವರೇ ಮ್ಯೂಸಿಯಂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇಲ್ಲಿಯೇ ಮ್ಯೂಸಿಯಂ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಸಕ್ತಿ ತೋರಿದ್ದು, ಜತೆಗೆ ರೈಲು ನಿಲ್ದಾಣ ಅಭಿವೃದ್ಧಿಗೂ 1.3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ.

ಮ್ಯೂಸಿಯಂನಲ್ಲಿ ಏನಿರಲಿದೆ?: ಅರಸಾಳು ರೈಲ್ವೆ ನಿಲ್ದಾಣ ರಸ್ತೆಗೆ ಹೊರಳಿದರೆ ಮೊದಲಿಗೆ ಎದುರಾಗುವುದೇ ಮ್ಯೂಸಿಯಂ. ಆರಂಭದಲ್ಲೇ ಫೌಂಟೇನ್‌ ಕಾಣ ಸಿಗುತ್ತದೆ. ಇದು ನಿಮಗೆ ಸ್ವಾಮಿ ಆ್ಯಂಡ್‌ ಫ್ರೆಂಡ್ಸ್‌ ಸರಣಿ ನೆನಪು ಮಾಡುತ್ತದೆ. ಮುಂದೆ ಸಾಗಿದರೆ ಬಲಭಾಗದಲ್ಲಿ “ವೆಲ್‌ಕಮ್‌ ಟು ಮಾಲ್ಗುಡಿ’ ಎಂದು ಸ್ವಾಗತ ಕೋರುವ ಹೊಗೆ ಉಗುಳುವ ಉಗಿ ಬಂಡಿ ಮಾಡೆಲ್‌ ಬರಲಿದೆ. ಅದಿನ್ನೂ ಪೂರ್ಣಗೊಂಡಿಲ್ಲ. ಕಟ್ಟಡದ ಒಳ ಹೋಗುತ್ತಿದ್ದಂತೆ ಬಲಭಾಗದಲ್ಲಿ ಕತ್ತಲ ಕೋಣೆ ಇದೆ. ಅದರಲ್ಲಿ 31 ವರ್ಷಗಳ ಹಿಂದಿನ ಮಲೆನಾಡಿನ ಅಡುಗೆ ಕೋಣೆ ಕಾಣಲಿದೆ. ಒಲೆ ಪಕ್ಕದಲ್ಲಿ ಅಜ್ಜಿ, ಪಕ್ಕದಲ್ಲಿ ಚಿಕ್ಕ ಹುಡುಗನ ಪ್ರತಿಮೆ ಇದೆ. ಇದು ಸ್ವಾಮಿ ಮತ್ತು ಅಜ್ಜಿಯ ನೆನಪು ಮೂಡಿಸುತ್ತದೆ.

ಒಳಗಿನ ಹಾಲ್‌ಗೆ ಹೋದರೆ ಎಡಭಾಗದಲ್ಲಿ ಟಿಕೆಟ್‌ ಕೊಡುವ ಸ್ಥಳ ಇದ್ದು, ಅಲ್ಲಿ ನಿಮಗೆ ಖುದ್ದು ಮಲೆನಾಡ ಬಟ್ಟೆ ತೊಟ್ಟ ಶಂಕರನಾಗ್‌ ಅವರೇ ಟಿಕೆಟ್‌ ಕೊಡಲಿದ್ದಾರೆ. ಗೋಡೆ ಸುತ್ತಲೂ ಪಂಚತಂತ್ರ ಕಥೆ ಹೇಳುವ ಪೇಂಟಿಂಗ್‌ ಮಾಡಲಾಗಿದೆ. ಹಾಗೇ ಹೊರಗೆ ಹೋದರೆ ಹುಲಿ ಪ್ರತಿಕೃತಿ, ಜಿಂಕೆ, ಕಡವೆ ಚಿತ್ರಗಳು ಕಾಣ ಸಿಗುತ್ತವೆ. ಟಿಕೆಟ್‌ ಕೊಡುವ ರೂಂಗೆ ಹೋಗಲು ಅವಕಾಶವಿದ್ದು, ಅಲ್ಲಿ ನೀವು ಶಂಕರನಾಗ್‌ ಜತೆ ಸೆಲ್ಫೀ ಕೂಡ ತೆಗೆದುಕೊಳ್ಳಬಹುದು. ಶಂಕರನಾಗ್‌ ಪ್ರತಿಕೃತಿ ಇನ್ನೂ ನಿರ್ಮಾಣ ಹಂತದಲ್ಲಿದ್ದು ಜಾನ್‌ ದೇವರಾಜ್‌ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೇ ಗೇಟ್‌ನಿಂದ ಹಿಡಿದು ಪ್ರತಿಯೊಂದು ವಸ್ತುಗಳು ವಿಶೇಷ ಆಕೃತಿ, ನೈಜತೆಯಿಂದ ಕೂಡಿವೆ.

Advertisement

ದೇಶ ವಿದೇಶಗಳ ಹೂಜಿ, ಮಡಿಕೆ: ಈ ಮ್ಯೂಸಿಯಂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲು ಜಾನ್‌ ದೇವರಾಜ್‌ ವಿಶೇಷ ಯೋಜನೆ ರೂಪಿಸಿದ್ದಾರೆ. ಚೀನಾ, ಪೆರು, ಈಜಿಪ್ಟ್, ಆಫ್ರಿಕಾ ದೇಶದ ಮಡಕೆ, ಹೂಜಿಗಳನ್ನು ಖುದ್ದು ಅವರೇ ತಯಾರು ಮಾಡುತ್ತಿದ್ದಾರೆ. ಅವುಗಳನ್ನು ಸುಡಲು ಗೂಡನ್ನು ಸ್ವಯಂ ರೆಡಿ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಮ್ಯೂಸಿಯಂ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಇದರೊಂದಿಗೆ ಇಂಟರ್‌ಸಿಟಿ, ಎಕ್ಸ್‌ ಪ್ರಸ್‌ ರೈಲುಗಳು ಇಲ್ಲೇ ನಿಲ್ಲುವ ಸ್ಥಳೀಯರ ಬೇಡಿಕೆಯೂ ಈಡೇರಲಿದೆ.

31 ವರ್ಷಗಳ ನಂತರ ಆ ಸ್ಥಳಗಳನ್ನು ಮತ್ತೆ ನೋಡಿ ಸಂತಸವಾಯ್ತು. ರೈಲ್ವೆ ಇಲಾಖೆ ಮ್ಯೂಸಿಯಂ ನಿರ್ಮಾಣ ಜವಾಬ್ದಾರಿ ನನಗೆ ನೀಡಿದ್ದು, ಖುಷಿ ತಂದಿದೆ. ಈ ಮ್ಯೂಸಿಯಂನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೇನೆ. ನಾಲ್ಕು ವಾರದಲ್ಲಿ ಕೆಲಸ ಪೂರ್ಣಗೊಳ್ಳಬಹುದು.
-ಜಾನ್‌ ದೇವರಾಜ್‌, ಕಲಾವಿದ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next