Advertisement
ಕೌಲಾಲಂಪುರ ಮಲೇಷ್ಯಾದ ರಾಜಧಾನಿ. ಇತರ ಮಹಾನಗರಗಳಂತೆ ತಲೆಯೆತ್ತಿ ಮುಗಿಲು ಚುಂಬಿಸುವ ಕಟ್ಟಡಗಳು, ಅಲ್ಲಿನ ಹೆಮ್ಮೆಯ ಸಂಕೇತವಾದ ಅವಳಿ ಬೃಹತ್ ಗೋಪುರಾಕೃತಿಯ ಕಟ್ಟಡಗಳು, ಸ್ವತ್ಛ ಬೀದಿ, ವಿದೇಶೀ ಆಗಂತುಕರನ್ನು ಸ್ವಾಗತಿಸುವ ಸುಸಜ್ಜಿತ ಲಾಡ್ಜ್ ಗಳು- ಇವೆಲ್ಲ ಅಚ್ಚುಕಟ್ಟು ನಮ್ಮನ್ನು ಆಕರ್ಷಿಸಿತು. ಈ ರಾಜಧಾನಿ ನಗರದ ಒಂದು ಭಾಗ ಪುತ್ರಜಯ ಸರಕಾರೀ ಕಚೇರಿಗಳನ್ನು ಹೊಂದಿದ ಭಾಗ. ಇಲ್ಲಿ ನಮ್ಮನ್ನು ಕೈಬೀಸಿ ಕರೆದ ಎರಡು ಸಂಗತಿಗಳಿವೆ. ಒಂದು, ಜನನಿಬಿಡ ನಗರದ ಹೃದಯ ಭಾಗದಲ್ಲೇ ಅಲ್ಲಲ್ಲಿ ಹಸಿರು ಹೊದಿಕೆಯ ನಿತ್ಯ ಹರಿದ್ವರ್ಣದ ಅರಣ್ಯ (evergreen forest) ! ಹತ್ತುಹಲವು ಮಹಾನಗರಗಳಲ್ಲಿ ಸುತ್ತಾಡಿದ ನನಗೆ ಈ “ನಗರ ಕಾನನ’ದ ದೃಶ್ಯ ಆಪ್ಯಾಯಮಾನವಾಗಿ ಕಂಗೊಳಿಸಿತು. ಎರಡು, ಅದೇ ರೀತಿ ಸುತ್ತಾಡಲು ಕೌಲಾಲಂಪುರ ನಗರದ ಸುತ್ತ ಹಾಗೂ ಹೊರ ವಲಯಕ್ಕೆ ಹವಾನಿಯಂತ್ರಿತ, ಸ್ವತ್ಛ ಸಾರಿಗೆ ವ್ಯವಸ್ಥೆ. ಇದರಲ್ಲೇನಿದೆ ವಿಶೇಷ ಎಂದೆನಿಸಬಹುದು. ಮಲೇಷ್ಯಾದ “ರಿಗೇಟ್’ ನೋಟನ್ನು ಕೈಯಲ್ಲಿ ಹಿಡಿದು ಬಸ್ ಮೇಲೇರಿದ ನಮಗೆ ಆಶ್ಚರ್ಯ ಕಾದಿತ್ತು. “”ಸರ್, ಇದು ಫ್ರೀ ಬಸ್; ಸರಕಾರದ ವತಿಯಿಂದಲೇ ಜನತೆಗೊಂದು ಸೇವಾ ಸೌಲಭ್ಯದ ಸಾರಿಗೆ ವ್ಯವಸ್ಥೆ” ಎಂದುಬಿಟ್ಟ ವಾಹನ ಚಾಲಕ. “”ಹೌದೇ” ಎಂದು ಉಚಿತ ಬಸ್ಸಿನ ಪಯಣ ಖಚಿತಪಡಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿದ್ದೇ ಮಾಡಿದ್ದು. ಹಾಗಾಗಿ, ಕೇವಲ 2 ದಿನಗಳಲ್ಲಿ ಕೌಲಾಲಂಪುರದ ಅಂದ ಸವಿಯುವ ಸದವಕಾಶ ದೊರಕಿತ್ತು.
ಮಲೇಷ್ಯಾ ಹಿಂದೂ, ಬೌದ್ಧ ಪರಂಪರೆಯನ್ನು ಉಳಿಸಿಕೊಂಡ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ. ಮಲಯಾ, ಚೀನೀ ಭಾಷಿಗರ ಜತೆ ತಮಿಳು ಜನತೆಯಲ್ಲಿ ಜತೆಯಾಗಿ ಬಾಳುವ ರಾಷ್ಟ್ರವದು. ಭಾರತದ ಬಗೆಗೆ ತುಂಬಾ ಸದ್ಭಾವನೆ ಬೆಳೆಸಿಕೊಂಡು, ವಿದೇಶಿಗರನ್ನು ಗೌರವ, ಆತ್ಮೀಯತೆಯಿಂದ ಕಾಣುವ ಮಾನಸಿಕತೆ ಅಲ್ಲಿದೆ. ಅಲ್ಲಿನ ಮುಸ್ಲಿಂ ಮಹಿಳೆಯರೂ ಬುರ್ಖಾ ಧರಿಸದೆ, ತಲೆಗೊಂದು ಸ್ಕಾರ್ಪ್ ಕಟ್ಟಿ , ಎಲ್ಲಾ ರಂಗಗಳಲ್ಲಿಯೂ ಗಂಡಸರಂತೆ ಶ್ರಮಜೀವನದಲ್ಲಿ ಸಹಭಾಗಿಗಳಾಗುತ್ತಾರೆ. ಸುಂದರ ವಿನ್ಯಾಸದ ಮಸೀದಿಗಳು, ತಮಿಳು ಶೈಲಿಯ ಹಿಂದೂ ದೇಗುಲಗಳು, ಲಾವೋತ್ಸೆ ಮತೀಯ ಪುರಾತನ ಮಂದಿರಗಳು- ಇವೆಲ್ಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ವಾಹನ ಚಾಲಕರೂ ಅವರ ರಾಷ್ಟ್ರದ ಬಗ್ಗೆ ಹೆಮ್ಮೆಯಿಂದ ದಾರಿಯುದ್ದಕ್ಕೂ ಮಾಹಿತಿ ಬಿತ್ತುತ್ತ ಸಾಗುತ್ತಾರೆ. ಓರ್ವ ಚೀನೀ ಮೂಲದ ಮಲೇಷಿಯನ್, ಹಿಂದೂ ಧರ್ಮ ಭಗವದ್ಗೀತೆಯ ಅಧ್ಯಯನ ಅನುಸಂಧಾನದ ಬಗೆಗೆ ವಿವರಿಸುವಾಗ ನಮ್ಮ ನೆಲದ ಅಧ್ಯಾತ್ಮಿಕ ಹಿರಿಮೆ ಅರಿವಾಯಿತು.
Related Articles
Advertisement
ಪಿ. ಅನಂತಕೃಷ್ಣ ಭಟ್