Advertisement
ಅಖಂಡ ಭಾರತ, ಸಮಗ್ರ ಕರ್ನಾಟಕದ ಭಾಗವಾಗಿರುವ ನಮ್ಮ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇಲ್ಲಿನ ಸಮಸ್ಯೆಗಳೇ ಬೇರೆಯಾಗಿದ್ದು, ಇದಕ್ಕಾಗಿ ವಿಶೇಷ ಅನುದಾನ ನಿಗದಿಗೊಳಿಸಬೇಕು ಎಂಬುದು ಮಲೆನಾಡು ಕರ್ನಾಟಕ ಹೋರಾಟದ ಪ್ರಮುಖ ಬೇಡಿಕೆ. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡು ಮಲೆನಾಡು ಕರ್ನಾಟಕ ಎಂದು ಘೋಷಿಸಬೇಕು ಎಂಬುದು ಆಗ್ರಹ.
Related Articles
Advertisement
ಮಲೆನಾಡು ಭಾಗದಿಂದ ಪ್ರತಿವರ್ಷ 5 ಸಾವಿರ ಕೋಟಿ ರೂ. ಮೊತ್ತದ ವಹಿವಾಟು ರಫ್ತು ಸೇರಿ ಇತರ ಬಾಬ್ತುಗಳಿಂದ ಆಗುತ್ತದೆ. ಸರಕಾರಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಆದಾಯವೂ ಬರುತ್ತದೆ. ಆದರೆ, ನಮ್ಮ ಭಾಗದ ಅಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹಣ ಸಿಗುತ್ತಿಲ್ಲ. ನಾವು ಸವಕಳಿಯಿಂದ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಡಾ| ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳಿಗೆ ಸಾಕಷ್ಟು ಅನುದಾನ ಸಿಕ್ಕಿದೆ. ಆದರೆ, ಮಲೆನಾಡು ಭಾಗಕ್ಕೆ ಆದ್ಯತೆ ಸಿಕ್ಕಿಲ್ಲ ಎನ್ನುತ್ತಾರೆ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ.
ಪ್ರತ್ಯೇಕತೆಯಲ್ಲ :
ನಮ್ಮ ಧ್ವನಿ ಮತ್ತು ಹೋರಾಟ ಪ್ರತ್ಯೇಕತೆಯಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿಯ ಕಲ್ಪನೆಯೊಂದಿಗೆ ಮಲೆನಾಡು ಕರ್ನಾಟಕಕ್ಕೆ ಆದ್ಯತೆ ಕೊಡಿ. ಅಭಿವೃದ್ದಿ ದೃಷ್ಟಿಯಿಂದ ನೋಡಿ ಎಂಬುದಷ್ಟೇ ನಮ್ಮ ಮನವಿ. ಕಾಫಿ, ಟೀ, ಏಲಕ್ಕಿ, ಮೆಣಸು ಹೀಗೆ ನಮ್ಮ ಭಾಗದಿಂದ ಸಾಕಷ್ಟು ವಾಣಿಜ್ಯ ವಹಿವಾಟು ನಡೆಯುತ್ತವೆ. ಅಭಿವೃದ್ಧಿಗೆ ಯಾಕೆ ಅನುದಾನ ಸಿಗುತ್ತಿಲ್ಲ ಎಂದು ಶೃಂಗೇರಿ ಶಾಸಕ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಕೇಳುತ್ತಾರೆ.
ಮಲೆನಾಡಿನ ಸಮಸ್ಯೆ ರಾಜ್ಯದ ಇತರ ಭಾಗಕ್ಕಿಂತ ಭಿನ್ನ. ಇತರ ಜಿಲ್ಲೆಗಳಿಗೆ ಕೊಟ್ಟಂತೆ ಇಲ್ಲೂ ಅನುದಾನ ನಿಗದಿ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ, ನಾವು ಮಲೆನಾಡು ಕರ್ನಾಟಕ ಎಂದು ಘೋಷಿಸಿ ವಿಶೇಷ ಯೋಜನೆ ರೂಪಿಸಿ ಅಭಿವೃದ್ಧಿಗೆ ಒತ್ತು ನೀಡಿ ಎಂಬ ಬೇಡಿಕೆ ಇಟ್ಟಿದ್ದೇವೆ. ಬೇರೆ ಯಾವುದೇ ಉದ್ದೇಶ ಇಲ್ಲ.-ಎಚ್.ಕೆ.ಕುಮಾರಸ್ವಾಮಿ, ಸಕಲೇಶಪುರ ಶಾಸಕ
ನಾವು ಕೂಡ ಅಖಂಡ ಕರ್ನಾಟಕದ ಭಾಗ. ಇದರಲ್ಲಿ ಎಳ್ಳಷ್ಟೂ ಬೇರೆ ಮಾತಿಲ್ಲ. ಆದರೆ, ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಅಭಿವೃದ್ಧಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಬೇಕು. ಪ್ರಾಣಿ-ಮಾನವ ಸಂಘರ್ಷ ತಪ್ಪಿಸಬೇಕು, ರಸ್ತೆ-ಸೇತುವೆ ಸೇರಿ ಮೂಲಸೌಕರ್ಯ ಕಲ್ಪಿಸಬೇಕು. ಕೆಲ ವಿಚಾರಗಳಲ್ಲಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು.-ಟಿ.ಡಿ.ರಾಜೇಗೌಡ, ಶೃಂಗೇರಿ ಶಾಸಕ
ಆಗುಂಬೆ, ಕೊಟ್ಟಿಗೆಹಾರ, ಭಾಗಮಂಡಲ ಹೀಗೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಇರುವುದು ಮಲೆನಾಡಿನಲ್ಲಿ. ಇದರಿಂದ ಬೆಳೆ ಹಾನಿಯಾಗುತ್ತಿದೆ. ಜಮೀನು ಕಳೆದುಕೊಳ್ಳುತ್ತಿದ್ದೇವೆ. ರಸ್ತೆ ಸಂಪರ್ಕ ಇಲ್ಲ. ಹೀಗಾಗಿ, ಮಲೆನಾಡು ಕರ್ನಾಟಕ ಎಂದು ಘೋಷಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು. ಇದನ್ನು ಪ್ರತ್ಯೇಕತೆ ಧ್ವನಿ ಎಂದು ಭಾವಿಸಬಾರದು. -ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಶಾಸಕ
-ಎಸ್.ಲಕ್ಷ್ಮೀ ನಾರಾಯಣ