ಮುಂಬಯಿ : 2008ರ ಮಾಲೇಗಾಂವ್ ಬ್ಲಾಸ್ಟ್ ಕೇಸ್ ನಲ್ಲಿ ಲೆ| ಕ| ಪುರೋಹಿತ್ ಸಹಿತ ಎಲ್ಲ ಏಳು ಆರೋಪಿಗಳ ವಿರುದ್ಧ ಇಂದು ಗುರುವಾರ ಎನ್‌ಐಎ ಕೋರ್ಟ್, “ಉಗ್ರ ಸಂಚು, ಕೊಲೆ ಮತ್ತು ಇತರ ಅಪರಾಧಗಳ’ ಆರೋಪವನ್ನು ಹೊರಿಸಿದೆ.
ವಿಚಾರಣಾ ನ್ಯಾಯಾಲಯ ಇಂದು ಬೆಳಗ್ಗಿನ ವಿಚಾರಣೆಯಲ್ಲಿ ಪ್ರಕರಣ ಓರ್ವ ಆರೋಪಿಯಾಗಿರುವ ಲೆ| ಕ| ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರು “ತಮ್ಮ ವಿರುದ್ಧ ದೋಷಾರೋಪ ಮಾಡುವುದನ್ನು ಮುಂದಕ್ಕೆ ಹಾಕಬೇಕೆಂದು’ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತಲ್ಲದೆ ದೋಷಾರೋಪಗಳು ಈಗಲೇ ಸಿದ್ಧವಿವೆ ಎಂದು ಹೇಳಿತು.
ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸಿದ ತತ್‌ಕ್ಷಣವೇ ಎಲ್ಲ ಆರೋಪಿಗಳು ತಾವು ಈ ಪ್ರಕರಣದಲ್ಲಿ ನಿರಪರಾಧಿಗಳೆಂದು ಹೇಳಿಕೊಂಡರು.
ನಿನ್ನೆ ಸೋಮವಾರ ಬಾಂಬೆ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹಾಗಿದ್ದರೂ ಅದು ಕ| ಪುರೋಹಿತ್ ಯುಎಪಿಎ ಕಾಯಿದೆಯಡಿ ತಮ್ಮ ವಿರುದ್ದ ನಡೆಸುತ್ತಿರುವ ಕಾನೂನು ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ನ.21ರಂದು ಮುಂದಿನ ವಿಚಾರಣೆಯನ್ನು ನಿಗದಿಸಿತು.
2008ರ ಸೆ.29ರಂದು ಮಾಲೇಗಾಂವ್ ಮಸೀದಿಯ ಸಮೀಪ ಮೋಟಾರ್ ಸೈಕಲ್‌ಗೆ ಬಿಗಿಯಲಾಗಿದ್ದ ಸ್ಫೋಟ ಉಪಕರಣವು ಬ್ಲಾಸ್ಟ್ ಆದ ಪ್ರಕರಣದಲ್ಲಿ ಆರು ಮಂದಿ ಮಡಿದು ಇತರ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.