Advertisement

ತಿಂಗಳಾಂತ್ಯದವರೆಗೆ ಭದ್ರಾ ನೀರು ಹರಿಸಲು ಮನವಿ

11:55 AM May 03, 2020 | Naveen |

ಮಲೇಬೆನ್ನೂರು: ಭದ್ರಾ ಜಲಾಶಯದ ಕೊನೆ ಭಾಗದ ಜಮೀನುಗಳಿಗೆ ನೀರಿನ ಅವಶ್ಯಕತೆಯಿದೆ. ಹಾಗಾಗಿ ಈ ತಿಂಗಳ ಅಂತ್ಯದವರೆಗೆ ನೀಡು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಎಚ್‌. ಓಂಕಾರಪ್ಪ ನೇತೃತ್ವದಲ್ಲಿ ರೈತರು ಪಟ್ಟಣದ ನೀರಾವರಿ ನಿಗಮದಲ್ಲಿ ಪ್ರಭಾರಿ ಇಇ ರಾಜೇಂದ್ರ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಭದ್ರಾ ಜಲಾಶಯದ ವೇಳಾಪಟ್ಟಿ ಪ್ರಕಾರ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಗಳಾದ 12, 13, 14, 15, 16, ಮತ್ತು 11ಎಫ್‌ ಝೋನ್‌ಗಳ ವ್ಯಾಪ್ತಿಯ ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ತಲುಪಿಲ್ಲ. ಜಲಾಶಯದಿಂದ ಬಿಡುಗಡೆಯಾಗಿ ಒಂದು ತಿಂಗಳ ನಂತರ ಕೊನೆಭಾಗದ ಅಚ್ಚುಕಟ್ಟುಗಳಿಗೆ ನೀರು ತಲುಪಿರುತ್ತದೆ. ಆದ್ದರಿಂದ ಆ ಭಾಗಗಳಲ್ಲಿ ತಡವಾಗಿ ನಾಟಿ ಮಾಡಿದ್ದೇವೆ. ಈ ವ್ಯಾಪ್ತಿಯ ಜಮೀನುಗಳಲ್ಲಿ ಸುಮಾರು 50 ಭಾಗ ಕಾಳು ಕಟ್ಟುವ ಹಂತದಲ್ಲಿದ್ದರೆ ಇನ್ನುಳಿದ 50 ಭಾಗಗಳಲ್ಲಿ ಇನ್ನೂ ತೆನೆ ಒಡೆಯುವ ಹಂತದಲ್ಲಿದ್ದು ನೀರಿನ ಅವಶ್ಯಕತೆ ಇರುತ್ತದೆ. ಸದರಿ ವೇಳಾಪಟ್ಟಿಯಂತೆ ಮೇ 7ರಂದು ನೀರು ನಿಲುಗಡೆ ಮಾಡಿದರೆ ಕೊನೆ ಭಾಗದ ಸಾವಿರಾರು ಎಕರೆ ಭತ್ತದ ಬೆಳೆ ಹಾನಿಗೊಳಗಾಗುತ್ತದೆ. ಆದ್ದರಿಂದ ಮೇ 30 ರವರೆಗೆ ನಾಲೆಯಲ್ಲಿ ನೀರು ಹರಿಸುವಂತೆ ಓಂಕಾರಪ್ಪ ಇಂಜಿನಿಯರ್‌ಗಳಿಗೆ ಒತ್ತಾಯಿಸಿದರು.

ನಂತರ ಪ್ರಭಾರಿ ಇಇ ರಾಜೇಂದ್ರಪ್ರಸಾದ್‌ ಮತ್ತು ಎಇಇ ರವಿಕುಮಾರ್‌, ಜಿಪಂ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಕೊನೆ ಭಾಗದ ಜಮೀನುಗಳ ಸ್ಥಿತಿಗತಿ ಅರಿಯಲು ರೈತರೊಂದಿಗೆ ತೆರಳಿ ವೀಕ್ಷಿಸಿದರು. ಜಿಪಂ  ಸದಸ್ಯ ಬಿ.ಎಂ. ವಾಗೀಶಸ್ವಾಮಿ ಮಾತನಾಡಿ, ರೈತರು ಕಳೆದೆರಡು ಬೆಳೆಗಳನ್ನು ಬೆಳೆಯದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಬಾರಿ ಎಇಇ ರವಿಕುಮಾರ್‌ ಅವರು ಇಲ್ಲಿಯವರೆಗೆ ನೀರು ತಲುಪಿಸಿದ್ದಾರೆ. ರೈತರೂ ಸಹ ಈ ಸಾರಿ ಬೆಳೆ ಬೆಳೆಯಬಹುದು ಎಂಬ ಆಶಾಭಾವನೆಯಿಂದ ನಾಟಿ ಮಾಡಿದ್ದಾರೆ. ಕಾಳು ಕಟ್ಟುವ ಹಂತದಲ್ಲಿರುವಾಗ ನೀರು ಸಿಗದಿದ್ದಲ್ಲಿ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗುತ್ತದೆ. ದಯವಿಟ್ಟು ಮೇ 30ರವರೆಗೆ ನೀರು ಹರಿಸುವಂತೆ ಪ್ರಭಾರಿ ಇಇ ರಾಜೇಂದ್ರಪ್ರಸಾದ್‌ ಅವರಿಗೆ ಮನವಿ ಮಾಡಿದರು.

ಜಲಾಶಯದಲ್ಲಿ 28 ಟಿಎಂಸಿ ನೀರು ಇದ್ದು ಅದರಲ್ಲಿ 13 ಟಿಎಂಸಿ ನೀರು ಡೆಡ್‌ ಸ್ಟೋರೇಜ್‌ ಆಗಿದೆ. 7 ಟಿಎಂಸಿ ನೀರನ್ನು ಕುಡಿಯಲು ಮೀಸಲಿಟ್ಟು, ಅದರಲ್ಲಿ ಈಗಾಗಲೇ 3 ಟಿಎಂಸಿ ನೀರನ್ನು ಬಳಸಿದ್ದೇವೆ. ಇನ್ನುಳಿದ 10 ರಿಂದ 11 ಟಿಎಂಸಿ ನೀರು ಬಳಸಬಹುದಾಗಿದೆ. ತಾಂತ್ರಿಕವಾಗಿ ಮೇ 30 ನೀರು ಹರಿಸುವುದು ಕಷ್ಟ ಸಾಧ್ಯ. ಆದರೂ ರೈತರು ನೀಡಿದ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಪ್ರಭಾರಿ ಇಇ ರಾಜೇಂದ್ರ ಪ್ರಸಾದ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next