Advertisement

ಪುರುಷ ಪ್ರಧಾನ ಪೊಲೀಸ್‌ ಇಲಾಖೆ

12:16 PM Feb 04, 2018 | Team Udayavani |

ಬೆಂಗಳೂರು: ರಕ್ಷಣಾ ಇಲಾಖೆ, ಪೊಲೀಸ್‌ ಇಲಾಖೆ  ಸೇರಿದಂತೆ ಪುರುಷ ಪ್ರಧಾನ ಇಲಾಖೆಗಳಲ್ಲಿ ಮಹಿಳೆಯರಿಗೆ ಆಯಕಟ್ಟಿನ  ಹುದ್ದೆ ನೀಡಲು ಹಿಂಜರಿಯಲಾಗುತ್ತಿದೆ ಎಂದು ಐಜಿಪಿ ಡಿ. ರೂಪಾ ಕಳವಳ ವ್ಯಕ್ತಪಡಿಸಿದರು.

Advertisement

ಬಂಟರ ಸಂಘದ ಮಹಿಳಾ ವಿಭಾಗದ ರಜತ ಮಹೋತ್ಸವದ ಅಂಗವಾಗಿ ವಿಜಯನಗರದ ಬಂಟರ ಸಂಘ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ರಕ್ಷಣಾ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಪ್ರಮುಖ ಸ್ಥಾನಗಳಲ್ಲಿ ಪುರುಷ ಅಧಿಕಾರಿಗಳಿಗೆ ಹೆಚ್ಚು ಮಣೆ ಹಾಕಲಾಗುತ್ತದೆ. ಮಹಿಳೆಯರು ಉನ್ನತ ಹುದ್ದೆಯಲ್ಲಿದ್ದರೆ ಸಮರ್ಥವಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪ ಹೊರಿಸಲಾಗುತ್ತದೆ ಎಂದು ಹೇಳಿದರು.

ಕೆಲಸದ ವಿಚಾರದಲ್ಲಿ ಮಹಿಳೆ- ಪುರುಷ ಎಂಬ ವ್ಯತ್ಯಾಸ ಇರುವುದಿಲ್ಲ. ಆದರೆ, ವ್ಯವಸ್ಥಿತವಾಗಿ ಕೆಲವರು ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಮುಂದುವರಿಯದಂತೆ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರಗಳನ್ನು ಬಯಲಿಗೆ ಎಳೆದಾಗ ಅನೇಕರು ನನ್ನನ್ನು ಪ್ರಶ್ನಿಸಿದ್ದರು. ಎಲ್ಲವನ್ನು ಸಮರ್ಥವಾಗಿ ಎದುರಿಸಿದೆ ಎಂದರು.

ಪೂಜನೀಯ ಸ್ಥಾನ: ಮೈಸೂರು ರಾಜಮನೆತನದ ಡಾ. ಪ್ರಮೋದಾದೇವಿ ಒಡೆಯರ್‌, ಮಹಿಳೆಯರ ಸಬಲೀಕರಣದ ಚರ್ಚೆ ಈಗ ಜಗತ್ತಿನಾದ್ಯಂತ ನಡೆಯುತ್ತಿದೆ. ಬಂಟರ ಸಮುದಾಯ ಅದನ್ನು ತಲೆತಲಾಂತರದಿಂದ ಪಾಲಿಸಿಕೊಂಡು ಬಂದಿದೆ. ಭಾರತದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಮಹಿಳೆಯನ್ನು ಲಕ್ಷ್ಮೀ, ಅನ್ನಪೂರ್ಣೆ, ದುರ್ಗೆ, ರಾಜರಾಜೇಶ್ವರಿ ಎಂದು ಗೌರವಿಸಲಾಗುತ್ತದೆ. ಎಲ್ಲಾ ದೇವತೆಗಳ ಗುಣವನ್ನು ಮಹಿಳೆ ಹೊಂದಿದ್ದಾಳೆ ಎಂದು ಬಣ್ಣಿಸಿದರು.

ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಮಹಿಳೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.  ದೇಶದಲ್ಲಿ ಪ್ರತಿ ಸಾವಿರ ಪುರುಷರಿಗೆ 855 ಮಹಿಳೆಯರು ಮಾತ್ರವಿದ್ದಾರೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ.13 ಸ್ಥಾನಗಳು ಮಾತ್ರವೇ ಸಿಕ್ಕಿದೆ. ಇದು ಹೆಚ್ಚಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನ್ಯಾಯಾಧೀಶೆ ವಿನುತಾ ಪಿ. ಶೆಟ್ಟಿ, ಐಪಿಎಸ್‌ ಅಧಿಕಾರಿ ಧರಣಿದೇವಿ ಮಾಲಗತ್ತಿ, ಡಾ. ವಾಹಿನಿ ಅರವಿಂದ್‌ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಬಂಟರ ಸಂಘದ ಮಹಿಳಾ ವಿಭಾಗದ ಮುಖ್ಯಸ್ಥೆ ಅಮೃತಾ ಎಸ್‌.ಶೆಟ್ಟಿ, ಉಪಾಧ್ಯಕ್ಷೆ ಅಮೃತ್‌ ಪಿ.ರೈ, ಸಂಚಾಲಕಿ ಮಾಲತಿ ಜೆ.ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಡಿ. ಚಂದ್ರಹಾಸ ರೈ, ಗೌರವ ಕಾರ್ಯದರ್ಶಿ ಜೆ. ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next