ಹನೂರು(ಚಾಮರಾಜನಗರ): ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಮಹಾರಥೋತ್ಸವವನ್ನೂ ರದ್ದುಗೊಳಿಸಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ಮಾತ್ರ ನೆರವೇರಿಸಲು ಜಿಲ್ಲಾಧಿಕಾರಿ ಡಾ||ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ 4 ದಿನಗಳ ದೀಪಾವಳಿ ಜಾತ್ರಾ ಮಹೋತ್ಸವ ಜರುಗಿ 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪೂಜಾ ಕೈಂಕರ್ಯಗಳಲ್ಲೀ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೊರೋನಾ ಹಿನ್ನೆಲೆ ಭಕ್ತಾದಿಗಳ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆ ಜಾತ್ರಾ ಮಹೋತ್ಸವದ 4 ದಿನಗಳ ಕಾಲ ನ.13 ರಿಂದ ನ.17ರವರೆಗೆ ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಿ ಮಹಾರಥೋತ್ಸವವನ್ನೂ ಕೂಡ ರದ್ದುಮಾಡಲು ಆದೇಶಿಸಿದ್ದಾರೆ. ಇನ್ನುಳಿದಂತೆ ಮಲೆ ಮಾದಪ್ಪನಿಗೆ ಜರುಗುವ ಎಣ್ಣೆಮಜ್ಜನ ಸೇವೆ, ದಮಾವಾಸ್ಯೆ ಪೂಜಾ ಕೈಂಕರ್ಯಗಳು ಮತ್ತು ತೆಪ್ಪೋತ್ಸವವನ್ನು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ನೆರವೇರಿಸುವಂತೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಮತದಾರನ ತೀರ್ಪನ್ನು ಗೌರವಯುತವಾಗಿ ಒಪ್ಪುತ್ತೇವೆ, ನಾನೇ ಸೋಲಿನ ಹೊಣೆ ಹೊರುತ್ತೇಬನೆ: ಡಿಕೆಶಿ
2 ಮಹಾರಥೋತ್ಸವ ರದ್ದು: ಪ್ರತಿ ವರ್ಷ ಮಲೆ ಮಾದಪ್ಪನಿಗೆ ಶಿವರಾತ್ರಿ ಜಾತ್ರೆ, ಯುಗಾದಿ ಜಾತ್ರಾ ಮಹೋತ್ಸವ ಮತ್ತು ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ವಾರ್ಷಿಕ 3 ಬಾರಿ ಮಹಾರಥೋತ್ಸವ ಜರುಗುತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಕೊರೋನಾ ಹಾವಳಿ ಹಿನ್ನೆಲೆ ಯುಗಾದಿ ಜಾತ್ರಾ ಮಹೋತ್ಸವವು ರದ್ದಾಗಿದ್ದ ಹಿನ್ನೆಲೆ ಮಹಾರತೋತ್ಸವ ಜರುಗಿರಲಿಲ್ಲ. ಇದೀಗ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿಯೂ ಮಹಾರಥೋತ್ಸವ ರದ್ದಾಗಿರುವುದರಿಂದ ಈ ಬಾರಿ 2 ಬಾರಿ ರಥೋತ್ಸವ ರದ್ದಾಗಿವೆ. ಈ ರೆಥೋತ್ಸವದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.