ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಆರಾಧ್ಯ ದೈವ ಮಹದೇಶ್ವರನಿಗೆ ಮಹಾಲಯ ಅಮಾವಾಸ್ಯೆಯ ಎಣ್ಣೆ ಮಜ್ಜನ ಸೇವೆ ವಿಧಿ ವಿಧಾನಗಳೊಂದಿಗೆ ಬೇಡಗಂಪಣ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಜರುಗಿತು.
ಮಹಾಲಯ ಅಮಾವಾಸ್ಯೆಯ ಎಣ್ಣೆ ಮಜ್ಜನದ ದಿನವಾದ ಶುಕ್ರವಾರ ಮಾಯ್ಕಾರ ಮಾದಪ್ಪನಿಗೆ ತ್ರಿಕಾಲ ಪೂಜೆಯ ಜೊತೆಗೆ ಎಳ್ಳು ಕಟ್ಟಿದ ಎಣ್ಣೆಯಿಂದ ಅಭಿಷೇಕ ಪೂಜಾ ಕೈಂಕರ‍್ಯಗಳನ್ನು ನೆರವೇರಿಸಲಾಯಿತು.
ಭಕ್ತರ ದಂಡು: ಮಹಾಲಯ ಅಮಾವಾಸ್ಯೆ ಎಣ್ಣೆ ವಿಶೇಷ ಪೂಜೆ ಹಿನ್ನೆಲೆ ಅಂತರ್ ರಾಜ್ಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ಶ್ರೀ ಕ್ಷೇತ್ರದತ್ತ ಹರಿದು ಬಂದಿತ್ತು. ರಾಜ್ಯದ ಮೈಸೂರು,ಮಂಡ್ಯ,ಬೆಂಗಳೂರು ಗ್ರಾಮಾಂತರ, ಪಿರಿಯಾಪಟ್ಟಣ, ಹುಣಸೂರು, ಕನಕಪುರ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ವಾಹನ ಮತ್ತು ಪಾದಯಾತ್ರೆಯ ಮೂಲಕ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳು ಉರುಳು ಸೇವೆ, ಮುಡಿ ಸೇವೆ ಸಮರ್ಪಿಸಿ ಪುಣ್ಯ ಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದರು. ಬಳಿಕ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇವೆಗಳಲ್ಲಿ ಭಾಗವಹಿಸಿ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿ ಭಕ್ತಿ ಮೆರೆದರು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸರದಿ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ದಾಸೋಹ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿತ್ತು.
ಆಕರ್ಷಕ ವಿದ್ಯುತ್ ದೀಪಾಲಂಕಾರ
ದೇವಾಲಯದ ರಾಜ ಗೋಪುರ, ಗರ್ಭ ಗುಡಿಯ ಗೋಪುರ, ದೇವಾಲಯದ ಒಳಾಂಗಣ,ಹೊರಾಂಗಣ ಸೇರಿದಂತೆ ಆಯಾ ಕಟ್ಟಿನ ಸ್ಥಳಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.