Advertisement

ಬಿಆರ್‌ಟಿ, ಮಹದೇಶ್ವರ ವನ್ಯಧಾಮ ; ಕಪ್ಪು ಚಿರತೆಗಳ ಆವಾಸ ಸ್ಥಾನ

11:29 PM Jan 05, 2021 | Team Udayavani |

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕೆಮರಾ ಟ್ರ್ಯಾಪ್‌ ಮೂಲಕ ಕಂಡು ಬಂದಿರುವ ಕಪ್ಪು ಚಿರತೆ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಈಗ ಕಪ್ಪು ಬಣ್ಣದ ಚಿರತೆಗಳ ಆವಾಸ ಸ್ಥಾನದ ಪಟ್ಟಿಗೆ ಮಹದೇಶ್ವರ ವನ್ಯಧಾಮವೂ ಸೇರಿದಂತಾಗಿದೆ.

Advertisement

ಕಳೆದ ಆಗಸ್ಟ್‌ನಲ್ಲಿ ಬಿಳಿಗಿರಿರಂಗ ನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೌಳಿಕಟ್ಟೆ ಡ್ಯಾಂ ಬಳಿ ಅರಣ್ಯ ಇಲಾಖೆ ಅಳವಡಿಸಿರುವ ಕೆಮರಾ ಟ್ರ್ಯಾಪ್‌ನಲ್ಲಿ ಕಪ್ಪು ಚಿರತೆಯ ಛಾಯಾಚಿತ್ರ ಮೂಡಿಬಂದಿತ್ತು. ಇದಾದ ಬಳಿಕ, ಮಲೆ ಮಹದೇಶ್ವರ ವನ್ಯಧಾಮದ ಲೊಕ್ಕನಹಳ್ಳಿ ಬೀಟ್‌ನಲ್ಲಿ ಅಳವಡಿಸಿರುವ ಕೆಮರಾ ಟ್ರ್ಯಾಪ್‌ನಲ್ಲಿ, ಡಿಸೆಂಬರ್‌ನಲ್ಲಿ ಕಪ್ಪು ಚಿರತೆ ಸೆರೆಯಾಗಿದೆ. ಬಿಆರ್‌ಟಿಯ ಬೈಲೂರು ವನ್ಯಜೀವಿ ವಲಯ , ಮಲೆ ಮಹದೇಶ್ವರ ಪಿ.ಜಿ. ಪಾಳ್ಯ ವನ್ಯಜೀವಿ ವಲಯಗಳು ಸಮೀಪ ದಲ್ಲೇ ಇದ್ದು, ಎರಡೂ ಕಡೆ ಕಂಡಿದ್ದು ಒಂದೇ ಕಪ್ಪು ಚಿರತೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪ್ರಪಂಚದ ಚಿರತೆಗಳಲ್ಲಿ ಶೇ. 11ರಷ್ಟು ಕಪ್ಪು ಚಿರತೆಗಳಿವೆ. ಮಲೇಷ್ಯಾ, ಥೈಲ್ಯಾಂಡ್‌, ಜಾವಾ ದ್ವೀಪಗಳಲ್ಲಿ ಇವು ಹೆಚ್ಚಿವೆ. ಅಲ್ಲದೇ ಭಾರತ, ಶ್ರೀಲಂಕಾ, ನೇಪಾಲದಲ್ಲೂ ಕಂಡು ಬರುತ್ತವೆ. ಭಾರತದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್‌ಗಢ, ಪ. ಬಂಗಾಲ, ಅಸ್ಸಾಂನಲ್ಲಿ ಕಂಡು ಬರುತ್ತವೆ. ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಪುರ, ಭದ್ರಾ, ಕಾಳಿ, ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡು ಬಂದಿವೆ. ಈಗ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲೂ ಕಪ್ಪು ಚಿರತೆ ಪತ್ತೆಯಾಗಿದೆ. ಆದರೆ, ಕಬಿನಿ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆಗಳು ವನ್ಯಜೀವಿ ಛಾಯಾಗ್ರಾಹಕರಿಗೆ ಹೆಚ್ಚು ಸೆರೆಸಿಕ್ಕಿ ಪ್ರಸಿದ್ಧಿಯಾಗಿವೆ!

ದಪ್ಪ ಚುಕ್ಕೆಗಳ ಚಿರತೆಗಳು ಬೇರೆ ಪ್ರಭೇದವಲ್ಲ ಅಥವಾ ಉಪಪ್ರಭೇದವೂ ಅಲ್ಲ! ಮಾಮೂಲಿ ಚಿರತೆಗಳ ವಂಶ ವಾಹಿನಿಯಿಂದ, ಚರ್ಮ ಮತ್ತು ಕೂದಲಿನಲ್ಲಿ ಮೆಲನಿನ್‌ ಅಂಶ ಜಾಸ್ತಿ ಯಾಗಿ ಅವುಗಳ ಚರ್ಮದ ಬಣ್ಣ ಕಪ್ಪಾಗಿರುತ್ತದೆ. ಇದನ್ನು ಮೆಲನಿಸಂ ಎಂದು ಕರೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next