ಮಾಲೆ: ಮಾಲ್ದೀವ್ಸ್‌ನಲ್ಲಿ ರವಿವಾರ ಸಾರ್ವತ್ರಿಕ ಚುನಾವಣೆ ನಡೆದಿದೆ. ಭಾರತ ವಿರೋಧಿ ಹಾಗೂ ಚೀನ ಪರ ನಿಲುವು ಹೊಂದಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮತ್ತೆ ಜಯ ಗಳಿಸಿದ್ದಾರೆ. ಹೀಗಾಗಿ ಮಾಲ್ದೀವ್ಸ್ ಜತೆಗಿನ ಭಾರತದ ಸಂಬಂಧವೂ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
93 ಕ್ಷೇತ್ರಗಳಿಗೆ ರವಿವಾರ ಬೆಳಗ್ಗೆ 8ರಿಂದ ಸಂಜೆ 5.30ರ ವರೆಗೆ ಮತದಾನ ನಡೆದಿದ್ದು, ಶೇ. 72.96ರಷ್ಟು ಮತದಾನ ದಾಖಲಾಗಿದೆ. ಒಟ್ಟು 86 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮುಯಿಜ್ಜು ನೇತೃತ್ವದ ಪೀಪಲ್ಸ್ ನ್ಯಾಶನಲ್ ಕಾಂಗ್ರೆಸ್ ಪಕ್ಷ (ಪಿಎನ್‌ಸಿ) 66 ಸ್ಥಾನಗಳಲ್ಲಿ ಜಯ ಗಳಿಸಿದೆ. ಹೀಗಾಗಿ 93 ಸದಸ್ಯರನ್ನು ಹೊಂದಿರುವ ಮಾಲ್ದೀವ್ಸ್ ಸಂಸತ್ತಿನಲ್ಲಿ ಮುಯಿಜ್ಜು ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದಂತಾಗಿದೆ.
ಮಾಲ್ದೀವ್ಸ್‌ನ ವಿವಾದಿತ ಪ್ರದೇಶದಲ್ಲಿ ಸಾವಿರಾರು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುತ್ತಿರುವುದು ಸಹಿತ ಚೀನದೊಂದಿಗೆ ಬೃಹತ್ ಆರ್ಥಿಕ ಸಂಬಂಧವನ್ನು ಹೊಂದಿರುವ ಮಾಲ್ದೀವ್ಸ್‌ಗೆ ಈ ಚುನಾವಣೆ ನಿರ್ಣಾಯಕವಾಗಿತ್ತು. ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮುಯಿಜ್ಜು ಜಯಗಳಿಸಿದ್ದರೂ ಮೈತ್ರಿ ನಾಯಕರು ಪಕ್ಷ ಬಿಟ್ಟ ಕಾರಣ ಅಧಿಕಾರಕ್ಕೆ ಕುತ್ತು ಬಂದಿತ್ತು. ಹೀಗಾಗಿ ಮತ್ತೆ ಚುನಾವಣೆ ನಡೆಸಲಾಗಿದ್ದು, ಮುಯಿಜ್ಜು ಪಕ್ಷ ಜಯಗಳಿಸಿದೆ.
ಈಗಾಗಲೇ ಭಾರತದ ಜತೆಗೆ ವೈಮನಸ್ಸು ಹೊಂದಿರುವ ಮುಯಿಜ್ಜು ಚೀನದ ಜತೆಗೆ ಉತ್ತಮ ಆರ್ಥಿಕ ಹಾಗೂ ರಕ್ಷಣ ಸಂಬಂಧವನ್ನು ಹೊಂದಲು ಬಯಸಿದ್ದರು. ಈಗ ಇದಕ್ಕೆ ಸಂಸತ್ತಿನ ಬೆಂಬಲವೂ ಸಿಕ್ಕಿರುವುದರಿಂದ ಅವರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಭಾರತದಲ್ಲೂ ಮತಗಟ್ಟೆ
ಭಾರತದ ತಿರುವನಂತಪುರ, ಶ್ರೀಲಂಕಾದ ಕೊಲೊಂಬೋ ಮತ್ತು ಮಲೇಷ್ಯಾದ ಕೌಲಾಲಾಂಪುರದಲ್ಲಿ ಒಟ್ಟು 3 ಬ್ಯಾಲೆಟ್ ಬಾಕ್ಸ್‌ಗಳನ್ನು ಇರಿಸಲಾಗಿತ್ತು ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.