ಪುಣೆ: ಮಂಗಳವಾರಪೇಟೆ ಮಾಲ್ದಕ್ಕದ ಪ್ರತಿಷ್ಠಿತ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾಕಾಳಿ ದೇವಸ್ಥಾನದ 54ನೇ ವಾರ್ಷಿಕ ನವರಾತ್ರಿ ಉತ್ಸವವು ಸೆ. 21ರಿಂದ ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಮಂದಿರದ ಮೊಕ್ತೇಸರ ಹಾಗೂ ಪ್ರದಾನ ಅರ್ಚಕ ಕರುಣಾಕರ ಶಾಂತಿ ಅವರ ಪೌರೋಹಿತ್ಯದಲ್ಲಿ ಸೆ. 21 ರಂದು ಘಟ ಸ್ಥಾಪನೆಗೊಂಡು ಪ್ರತಿ ದಿನ ಶ್ರೀದೇವಿಗೆ ವಿಶೇಷ ಹೂವಿನ ಅಲಂಕಾರ, ನವರಾತ್ರಿಯ ವಿಶೇಷ ತ್ರಿಕಾಲ ಪೂಜೆ, ಸಂಜೆ 7ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ಭಕ್ತರಿಂದ ಭಜನ ಕಾರ್ಯಕ್ರಮ, ರಾತ್ರಿ 9 ರಿಂದ ಮಂಗಳಾರತಿ ಹಾಗೂ ದೇವಿ ದರ್ಶನ ಮತ್ತು ಪೂಜಾ ಸೇವಾ ಕಾರ್ಯಗಳು ನಡೆಯಿತು.
ಸುಮಾರು 54 ವರ್ಷಗಳ ಹಿಂದೆ ಪ್ರತಿಸ್ಥಾಪನೆಗೊಂಡು ಪುಣೆಯಲ್ಲಿ ದಿನಂಪ್ರತಿ ವಿಶೇಷ ಹೂವಿನ ಅಲಂಕಾರಕ್ಕೆ ಪ್ರಸಿದ್ಧಿ ಪಡೆದ ಈ ದೇವಿ ಮಂದಿರದಲ್ಲಿ ಈ ಬಾರಿಯ ನವರಾತ್ರಿಯ ವಿಶೇಷ ದಿನಗಳಾದ ಸೆ, 28ರಂದು ಚಂಡಿಕಾ ಹೋಮ, ಸೆ. 29ರಂದು ಕುಮಾರಿಕಾ ಪೂಜನೆ, ಸೆ. 30 ರಂದು ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ವಿಜಯದಶಮಿಯ ವಿಶೇಷ ಪೂಜೆ ನಡೆಯಿತು.
ಮಹಾ ಪ್ರಸಾದ ವಿತರಣೆಯ ಅಂಗವಾಗಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಹತ್ತನೇ ದಿನ ದಸರಾದಂದು ಅಲಂಕೃತ ಮಂಟಪದಲ್ಲಿ ಶ್ರೀ ದೇವಿಯ ಪ್ರಭಾವಳಿಯ ಭವ್ಯ ಶೋಭಾಯಾತ್ರೆಯು ಸಂಜೆ 6.30 ರಿಂದ ಚೆಂಡೆ ವಾದ್ಯ ಘೋಷಗಳೊಂದಿಗೆ ನಗರದ ವಿವಿಧ ರಸ್ತೆಗಳ ಮುಖಾಂತರ ಸಾಗಿತು. ಈ ಸಂದರ್ಭದಲ್ಲಿ ಅಲ್ಲಲ್ಲಿ ಭಕ್ತರು ಶ್ರೀ ದೇವಿಗೆ ಹೂ ಹಣ್ಣುಕಾಯಿಯೊಂದಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ನವರಾತ್ರಿಯ ಈ ಪರ್ವ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ತುಳು ಕನ್ನಡಿಗರು ಅಲ್ಲದೆ ಗುಜರಾತಿ, ರಾಜಸ್ಥಾನಿ, ಮರಾಠಿ ಅಲ್ಲದೆ ಬೇರೆ ಬೇರೆ ಭಾಷೆಯ ದೇವಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು. ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಸೇವೆ ನೀಡಿದ ಎಲ್ಲ ಭಕ್ತರಿಗೆ ಶ್ರೀ ದುರ್ಗಾ ಪರಮೇಶ್ವರಿ ಶ್ರೀ ದುರ್ಗಾಕಾಳಿ ಸನ್ಮಂಗಳವನ್ನು ಕರುಣಿಸಲಿ ಎಂದು ಮಂದಿರದ ಪ್ರಧಾನ ಅರ್ಚಕರಾದ ಕರುಣಾಕರ ಶಾಂತಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ ಪುಣೆ