Advertisement

ಮಲ್ಚಿಂಗ್‌ ಶೀಟ್‌ ತಾಂತ್ರಿಕತೆ: ಮಲ್ಲಿಗೆ ಕೃಷಿಗೆ ಲಾಭದಾಯಕ

04:20 AM Jun 13, 2018 | Karthik A |

ಶಿರ್ವ: ಶಂಕರಪುರ ಮಲ್ಲಿಗೆಗೆ ಮಳೆಗಾಲದಲ್ಲಿ ಮಲ್ಚಿಂಗ್‌ ಶೀಟ್‌ ಅಳವಡಿಸುವುದರ ಮೂಲಕ ಕಳೆ, ಕೀಟಬಾಧೆಯಿಂದ ರಕ್ಷಿಸಿ ಉತ್ತಮ ಬೆಳೆ ತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ. ಕಾಪುವಿನ ಶಿರ್ವದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಲ್ಲೊಟ್ಟು ರಾಘವೇಂದ್ರ ನಾಯಕ್‌ ಇಂತಹ ಕಾರ್ಯ ಮಾಡುತ್ತಿದ್ದಾರೆ.

Advertisement

ಏನಿದು ಮಲ್ಚಿಂಗ್‌ ಶೀಟ್‌ (ಹೊದಿಕೆ)?
ಮಲ್ಚಿಂಗ್‌ ಶೀಟ್‌ನ ಒಂದು ಪದರ ಬಿಳುಪಾಗಿದ್ದು ಇನ್ನೊಂದು ಬದಿ ಕಪ್ಪು ಬಣ್ಣವನ್ನು ಹೊಂದಿದೆ. ಮಲ್ಲಿಗೆ ಗಿಡದ ಸುತ್ತಲೂ ಹೊದಿಕೆಯ ಬಿಳಿ ಭಾಗವನ್ನು ಮೇಲ್ಭಾಗಕ್ಕೆ ಬರುವಂತೆ ಹರಡಬೇಕು.ಬಿಳಿಭಾಗದ ಮೇಲೆ ಬಿದ್ದ ಸೂರ್ಯನ ಬೆಳಕು ಪ್ರತಿಫಲಿಸಿ ಗಿಡದ ಬುಡದ ಭಾಗದಲ್ಲಿ ಗಾಳಿ ಮತ್ತು ಬಿಸಿಲಿನ ಶಾಖ ದೊರೆಯದೆ ಕಳೆ ನಾಶವಾಗುತ್ತದೆ.ಮಳೆಗಾಲದ ಪ್ರಾರಂಭಿಕ ಹಂತದಲ್ಲಿ ಈ ಹೊದಿಕೆ ಅಳವಡಿಸುವುದರಿಂದ ಗಿಡಗಳನ್ನು ಮಳೆಗಾಲದ ಕೀಟ ಬಾಧೆ, ಕಳೆಗಳಿಂದ ರಕ್ಷಿಸಬಹುದಾಗಿದೆ. ಇದರೊಂದಿಗೆ ಶಿಲೀಂಧ್ರ ಬಾಧೆ ತಡೆ ಸಾಧ್ಯ. ಮಣ್ಣಿನ ಸವಕಳಿ ತಡೆಯುತ್ತದೆ. ಬೇಸಗೆಯಲ್ಲಿ ನೀರಿನ ಮಿತ ಬಳಕೆಗೂ ಸಹಕಾರಿಯಾಗುತ್ತದೆ. ಹೂ ಕೊಯ್ಯುವವರ ಕಾಲಿಗೆ ಬರುವ ನಂಜು ನಿವಾಕರವೂ ಆಗಿದೆ.


ಪ್ರಯೋಜನಗಳು

ವಿಪರೀತ ಮಳೆ ಬಂದರೆ ಮಲ್ಲಿಗೆ ಗಿಡಕ್ಕೆ ಬರುವ ಕೀಟ ಮತ್ತು ರೋಗಬಾಧೆಯಿಂದ ಗಿಡಗಳು ನಾಶವಾಗುತ್ತವೆ. ಗಿಡದ ಬುಡದಲ್ಲಿ ವಿಪರೀತ ಹುಲ್ಲು ಬೆಳೆಯುವುದರಿಂದ ಗಿಡಗಳ ಪೋಷಕಾಂಶ ಹೀರಲ್ಪಡುತ್ತದೆ. ಮಳೆಗಾಲದಲ್ಲಿ ಗಿಡಗಳ ಬುಡದಲ್ಲಿ ಬೆಳೆಯುವ ಗರಿಕೆ ಹುಲ್ಲು ಮತ್ತು ಭದ್ರಮುಷ್ಟಿ ಹುಲ್ಲು (ಕಳೆ) ಗಿಡಕ್ಕೆ ವಿಪರೀತ ಹಾನಿಯುಂಟು ಮಾಡುತ್ತದೆ. ಇದಕ್ಕಾಗಿ ಬಳಸುವ ಕಳೆನಾಶಕ ಗಿಡಕ್ಕೆ ಒಳ್ಳೆಯದಲ್ಲ. ಆದ್ದರಿಂದ್ದ ಮಲ್ಚಿಂಗ್‌ ಶೀಟ್‌ ಪ್ರಯೋಜನಕಾರಿ.

10 ಸೆಂಟ್ಸ್‌ ಜಾಗದಲ್ಲಿ ಸುಮಾರು 
50 ಮಲ್ಲಿಗೆ ಗಿಡಗಳನ್ನು ಬೆಳೆಯಬಹುದಾಗಿದ್ದು ಮಲ್ಚಿಂಗ್‌ ಶೀಟ್‌ ಅಳವಡಿಸಲು ಸುಮಾರು 2000ದಿಂದ 2,500 ರೂ. ಖರ್ಚು ತಗಲಬಹುದು. ತುಸು ದುಬಾರಿ ಎನಿಸಿದರೂ ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಲಾಭದಾಯಕವಾಗಿದೆ. ಹುಲ್ಲು ತೆಗೆಯುವ ಕೂಲಿಯಾಳುಗಳ ಕೊರತೆಗೆ ಸಹಕಾರಿಯಾಗಿದ್ದು ರೋಗ ಬಾಧಿಸದೇ ಇರುವುದರಿಂದ ಗುಣಮಟ್ಟದ ಮಲ್ಲಿಗೆ ಹೂವಿನ ಇಳುವರಿ ಸಿಗುತ್ತದೆ ಎಂದು ನಾಯಕ್‌ ಹೇಳುತ್ತಾರೆ.

ಸಹಾಯಧನ
ಅನುದಾನವಿದ್ದಲ್ಲಿ ಇತರ ಬೆಳೆಗಳಂತೆ ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಪಡೆಯಬಹುದು. ಈ ತಾಂತ್ರಿಕತೆ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು  ಮಾಹಿತಿ ನೀಡುತ್ತಾರೆ. ಶಿರ್ವ, ಬಂಟಕಲ್ಲು, ಪಾಂಬೂರು,  ಶಂಕರಪುರ ಪರಿಸರದಲ್ಲಿ  ಮಲ್ಲಿಗೆ ಬೆಳೆಗಾರರಿಗೆ ರಾಘವೇಂದ್ರ ನಾಯಕ್‌ ಅವರು ಮಾಹಿತಿ ನೀಡಿ ಹೊದಿಕೆ ಅಳವಡಿಸಲು ಸಹಕರಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಘವೇಂದ್ರ ನಾಯಕ್‌ ಸಂಪರ್ಕ: 8861866920

Advertisement

ಆರ್ಥಿಕಾಭಿವೃದ್ಧಿ ಸಾಧ್ಯ
ಹೊದಿಕೆ ಅಳವಡಿಸುವುದರಿಂದ ಮಳೆಗಾಲದಲ್ಲಿ  ಬರುವ ಕೀಟಬಾಧೆ, ಶಿಲೀಂದ್ರ ಬಾಧೆ ಮತ್ತು ಕಳೆಗಳಿಂದ ಮಲ್ಲಿಗೆ ಗಿಡಗಳನ್ನು ರಕ್ಷಿಸಲು ಸಹಕಾರಿಯಾಗಿದ್ದು ಉತ್ತಮ ಗುಣಮಟ್ಟದ ಮಲ್ಲಿಗೆ ಸಿಗುತ್ತದೆ. ಬೆಳೆಗೆ ಯಾವುದೇ ಬಾಧೆ ಇರದೆ ತಾಂತ್ರಿಕತೆ ಬಳಸಿ ಮಲ್ಲಿಗೆ ಕೃಷಿ ಮಾಡಿದರೆ ಆರ್ಥಿಕಾಭಿವೃದ್ಧಿ ಸಾಧ್ಯ
– ರಾಘವೇಂದ್ರ ನಾಯಕ್‌, ಮಲ್ಲಿಗೆ ಬೆಳೆಗಾರ

— ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next