Advertisement

ಕಿನ್ರಾರಾ ಓವಲ್‌ ಮೈದಾನ ಕ್ರಿಕೆಟ್‌ ಪಂದ್ಯಕ್ಕೆ ಲಭ್ಯವಿಲ್ಲ

11:12 PM May 31, 2022 | Team Udayavani |

ಹೊಸದಿಲ್ಲಿ: ಮಲೇಶ್ಯದ ಪ್ರಮುಖ ಕ್ರೀಡಾ ಅಂಗಣ ಕಿನ್ರಾರಾ ಅಕಾಡೆಮಿ ಓವಲ್‌ ಜೂನ್‌ ತಿಂಗಳಲ್ಲಿ ತನ್ನ ಕೊನೆಯ ಪಂದ್ಯದ ಆತಿಥ್ಯ ವಹಿಸಲಿದೆ. ಆಬಳಿಕ ಈ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯುವುದಿಲ್ಲ.

Advertisement

18 ವರ್ಷಗಳ ಬಳಿಕ ಮಲೇಶ್ಯ ಕ್ರಿಕೆಟ್‌ ಮತ್ತು ಭೂ ಮಾಲಕರೊಂದಿಗಿನ ಒಪ್ಪಂದವು ರದ್ದಾಗಿರುವುದು ಇದಕ್ಕೆ ಕಾರಣವಾಗಿದೆ.

ಕಳೆದ ಕೆಲವು ವರ್ಷಗಳಿಂದ ಭೂ ಮಾಲಕರು ಮತ್ತು ಮಲೇಶ್ಯ ಕ್ರಿಕೆಟ್‌ ನಡುವೆ ಸುಂಕದ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು. ಆಬಳಿಕ ಈ ವಿಷಯವು ನ್ಯಾಯಾಲಯಕ್ಕೆ ಹೋಯಿತು. ವಾದ ವಿವಾದ ಆಲಿಸಿದ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಭೂ ಮಾಲಕರ ಪರವಾಗಿ ತೀರ್ಪು ನೀಡಿತ್ತು.

ಮಲೇಶ್ಯ ಕ್ರಿಕೆಟ್‌ ಜೂನ್‌ 30 ರಂದು ಕಿನ್ರಾರಾ ಮೈದಾನದಿಂದ ನಿರ್ಗಮಿಸಲಿದೆ. ಅದಕ್ಕಿಂತ ಮೊದಲು ಈ ಮೈದಾನಲ್ಲಿ ಕೆಲವು ಪ್ರಮುಖ ಪಂದ್ಯಗಳು ನಡೆಯಲಿವೆ. ಜೂನ್‌ 1ರಿಂದ 10ರ ವರೆಗೆ ವನಿತಾ ಏಷ್ಯನ್‌ ಅರ್ಹತಾ ಕೂಟ ಇಲ್ಲಿ ನಡೆಯಲಿದೆ. ಆಬಳಿಕ ವನಿತಾ ಟಿ20 ಏಷ್ಯ ಕಪ್‌ ಜೂ. 15ರಿಂದ 25ರ ವರೆಗೆ ನಡೆಯಲಿದೆ.

10 ಏಕದಿನ ಪಂದ್ಯ
ಈ ಕ್ರೀಡಾಂಗಣಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಲು ಭಾರತೀಯ ಕ್ರಿಕೆಟ್‌ ಮಂಡಳಿ 4.65 ಲಕ್ಷ ಅಮೆರಿಕನ್‌ ಡಾಲರ್‌ ಕೊಡುಗೆ ನೀಡಿತ್ತು. ಆಬಳಿಕ ಈ ಮೈದಾನದಲ್ಲಿ ಪುರುಷರ 10 ಏಕದಿನ, 18 ಟಿ20, ಆರು ವನಿತೆಯರ ಏಕದಿನ, 25 ಟಿ20 ಮತ್ತು 25 ಯೂತ್‌ ಏಕದಿನ ಪಂದ್ಯಗಳು ನಡೆದಿವೆ.

Advertisement

2006ರಲ್ಲಿ ಭಾರತ, ಆಸ್ಟ್ರೇಲಿಯ ಮತ್ತು ವೆಸ್ಟ್‌ಇಂಡೀಸ್‌ ಒಳಗೊಂಡ ತ್ರಿಕೋನ ಸರಣಿಯಲ್ಲಿ ಸಚಿನ್‌ ತೆಂಡುಲ್ಕರ್‌ ಅಜೇಯ 141 ರನ್‌ ಸಹಿತ ಒಟ್ಟಾರೆ 222 ರನ್‌ ಪೇರಿಸಿದ್ದರು. 2008ರಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ಅಂಡರ್‌-19 ತಂಡ ಇದೇ ಮೈದಾನದಲ್ಲಿ ವಿಶ್ವಕಪ್‌ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next