Advertisement
ಆದರೆ ನಿದ್ದೆಯಿಂದ ಎದ್ದು ನೋಡಿದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮೊಬೈಲ್ ‘ಮಂಗಮಾಯ’!
Related Articles
Advertisement
ತಕ್ಷಣವೇ ಅಲ್ಲೇ ಸುತ್ತಮುತ್ತ ಹುಡುಕಾಡಿದಾಗ ಮರವೊಂದರ ಕೆಳಗೆ ಎಲೆಗಳ ಎಡೆಯಲ್ಲಿ ಕಾಣೆಯಾಗಿದ್ದ ಮೊಬೈಲ್ ಪತ್ತೆಯಾಗುತ್ತದೆ. ಖುಷಿಯಿಂದ ಕುಣಿದಾಡಿದ ಆ ಯುವಕ ಮೊಬೈಲ್ ಎತ್ತಿಕೊಂಡು ಅದಕ್ಕಂಟಿದ್ದ ಕೊಳೆಯನ್ನೆಲ್ಲಾ ಒರೆಸಿ ಆನ್ ಮಾಡಿ ಫೊಟೋ ಗ್ಯಾಲರಿಗೆ ಹೋಗಿ ನೋಡಿದಾಗ ಆತನ ಕಣ್ಣುಗಳನ್ನೇ ಅವನಿಗೆ ನಂಬಲಾಗಲಿಲ್ಲ. ಗ್ಯಾಲರಿ ತುಂಬೆಲ್ಲಾ ಕೋತಿಯ ಸೆಲ್ಫೀ ತುಂಬಿಕೊಂಡಿತ್ತು!
ಇದು ಮಲೇಷಿಯಾದಲ್ಲಿ ನಡೆದ ಘಟನೆಯಾಗಿದ್ದು 20 ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಝಕ್ರಿಡ್ಜ್ ರೋಡ್ಜಿ ಎಂಬಾತನೇ ಈ ವಿಚಿತ್ರ ಘಟನೆಗೆ ಸಾಕ್ಷಿಯಾದ ಯುವಕನಾಗಿದ್ದಾನೆ. ಕೋತಿಗಳ ಈ ಅಪರೂಪದ ಸೆಲ್ಫೀಯನ್ನು ಆತ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದತೆಯೇ ಅದು ವಿಶ್ವಾದ್ಯಂತ ವೈರಲ್ ಆಗುತ್ತದೆ. ಈ ವಿಚಿತ್ರ ಸೆಲ್ಫೀ ಹಿಂದಿನ ಕಥೆಯನ್ನು ಸ್ವತಃ ರೋಡ್ಜಿಯೇ ಬಿಬಿಸಿ ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾನೆ. ಕಳೆದು ಹೋಗಿದ್ದ ತನ್ನ ಮೊಬೈಲ್ ಅಚಾನಕ್ ಆಗಿ ಮರುದಿವಸ ಸಿಕ್ಕಿದಾಗ, ‘ನಿನ್ನ ಮೊಬೈಲ್ ಎಗರಿಸಿದ್ದ ಕಳ್ಳನ ಫೊಟೋ ಇರಬಹುದು ನೋಡು..’ ಎಂದು ರೋಡ್ಜಿಯ ಅಂಕಲ್ ರೇಗಿಸುತ್ತಾರೆ. ಅಂಕಲ್ ಮಾತು ನಿಜವೆ ಆಗಿತ್ತು!, ರೋಡ್ಜಿ ತನ್ನ ಮೊಬೈಲ್ ಗ್ಯಾಲರಿಗೆ ಹೋಗಿ ನೋಡಿದಾಗ ಅಲ್ಲಿ ಕೋತಿಗಳ ಚೇಷ್ಟೆಯೆಲ್ಲಾ ರೆಕಾರ್ಡ್ ಆಗಿತ್ತು. ನಗರ ಪ್ರದೇಶದಲ್ಲಿರುವ ಕೋತಿಗಳನ್ನು ಹೊರತಾಗಿಸಿ ಉಳಿದ ಕಡೆಗಳಲ್ಲಿ ಕೋತಿಗಳು ಮನೆಯೊಳಗೆ ನುಗ್ಗಿ ವಸ್ತುಗಳನ್ನು ಅಪಹರಿಸುವ ಘಟನೆಗಳು ನಡೆಯುವುದು ಬಹಳ ಅಪರೂಪ ಎನ್ನುವುದು ಈ ಯುವಕನ ಅಭಿಪ್ರಾಯ. ಈತನ ಸಹೋದರನ ಕೊಠಡಿಯ ತೆರದ ಕಿಟಕಿಯ ಮೂಲಕ ಒಳಬಂದಿದ್ದ ಕೋತಿ ತನ್ನ ಮೊಬೈಲ್ ಅಪಹರಿಸಿದ್ದಿರುವ ಸಾಧ್ಯತೆಗಳಿವೆ ಎಂಬುದು ಯುವಕನ ವಾದ. ‘ಇದು ಶತಮಾನಕ್ಕೊಮ್ಮೆ ನಿಮಗೆ ಕಾಣ ಸಿಗುವ ಘಟನೆ’ ಎಂಬ ಶೀರ್ಷಿಕೆಯನ್ನು ಕೊಟ್ಟು ಝಕ್ರಿಡ್ಜ್ ರೋಡ್ಜಿ ಈ ಫೊಟೋಗಳನ್ನು ಟ್ವೀಟ್ ಮಾಡುತ್ತಾನೆ. ಇದು ಟ್ವಿಟ್ಟರ್ ನಲ್ಲಿ ಪ್ರಕಟವಾಗುತ್ತಿದ್ದಂತೇ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಮತ್ತು ಸ್ಥಳೀಯ ಮಾಧ್ಯಮಗಳು ಇದನ್ನು ಸೆನ್ಷೇಷನಲ್ ಸುದ್ದಿಯಾಗಿ ಬಿಂಬಿಸುತ್ತವೆ.
‘ಮಂಕೀ ಸೆಲ್ಫೀ’ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ!
ಹೌದು, 2017ರಲ್ಲಿ ಡೇವಿಡ್ ಸ್ಲೇಟರ್ ಕಾಡಿನಲ್ಲಿ ಆನ್ ಮಾಡಿ ಇರಿಸಿದ್ದ ಕೆಮರಾವನ್ನು ಕಂಡಿದ್ದ ಕೋತಿಯೊಂದು ಆ ಕೆಮರಾವನ್ನು ಎತ್ತಿಕೊಂಡು ಬಗೆ ಬಗೆಯ ಸೆಲ‍್ಫೀಯನ್ನು ತೆಗೆದು ಬಳಿಕ ಡೇವಿಡ್ ನ ಕೆಮರಾವನ್ನು ಅಲ್ಲೆಲ್ಲೋ ಬಿಸಾಡಿ ಹೋಗಿತ್ತು. ಇನ್ನೊಂದು ಗಮ್ಮತ್ತಿನ ವಿಷಯವೇನೆಂದರೆ, ಡೇವಿಡ್ ಕೆಮರಾದಲ್ಲಿ ಸೆರೆಯಾಗಿದ್ದ ಕೋತಿಯ ಸೆಲ್ಫೀ ಫೊಟೋಗಳು ವಿಶ್ವಾದ್ಯಂತ ವೈರಲ್ ಆಗುತ್ತಿದ್ದಂತೆ ಕಾಪಿ ರೈಟ್ ವಿಚಾರದಲ್ಲಿ ಪೇಟಾ ಸಂಸ್ಥೆಯು ಡೇವಿಡ್ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿತ್ತು. ಪೇಟಾ ಸಂಸ್ಥೆಯ ವಾದವೇನೆಂದರೆ ಕೆಮರಾ ಡೇವಿಡ್ ನದ್ದಾಗಿದ್ದರೂ ಕೋತಿ ತಾನೇ ಸ್ವತಃ ಫೊಟೋ ತೆಗೆದಿದ್ದರಿಂದ ಅದರ ಹಕ್ಕು ಆ ಕೋತಿಯದ್ದಾಗಬೇಕೆಂಬುದಾಗಿತ್ತು! ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕಾದ ನ್ಯಾಯಾಲಯವು, ಕಾಪಿ ರೈಟ್ ಕಾಯ್ದೆಯನ್ನು ಕೋತಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನ ಬಳಿಕ ಈ ಫೊಟೋದಿಂದ ತನಗೆ ಬರುವ ಯಾವುದೇ ಆದಾಯದ 25%ವನ್ನು ಅಳಿವಿನಂಚಿನಲ್ಲಿರುವ ಕೋತಿಗಳ ಪ್ರಬೇಧಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇಂಡೋನೇಷಿಯಾದ ಸಂಸ್ಥೆಯೊಂದಕ್ಕೆ ನೀಡಲು ಡೇವಿಡ್ ಒಪ್ಪಿಕೊಳ್ಳುತ್ತಾರೆ. ಅಲ್ಲಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದ ‘ಕೋತಿ ಸೆಲ್ಫೀ’ ಪ್ರಕರಣವೊಂದು ಸುಖಾಂತ್ಯ ಕಾಣುತ್ತದೆ.