ಕೌಲಾಲಂಪುರ: ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ. ಶ್ರೀಕಾಂತ್ “ಮಲೇಶ್ಯ ಮಾಸ್ಟರ್ಸ್ ವರ್ಲ್ಡ್ ಟೂರ್ ಸೂಪರ್ 500 ಬ್ಯಾಡ್ಮಿಂಟನ್’ ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಹಾಂಕಾಂಗ್‌ನ ಯಿಪ್ ಯುಯಿ ಯಿನ್ ಅವರನ್ನು 21-14, 21-16 ಅಂತರದಿಂದ ಸುಲಭದಲ್ಲಿ ಸೋಲಿಸಿದರು. ಮೊದಲ ಗೇಮ್ ಅನ್ನು 7 ಅಂಕಗಳ ಅಂತರದಲ್ಲಿ ಗೆದ್ದ ಸೈನಾ, ದ್ವಿತೀಯ ಗೇಮ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದರಾದರೂ ಅಂತ್ಯದಲ್ಲಿ ಉತ್ತಮ ಅಂತರದಿಂದ ಗೆಲುವು ದಾಖಲಿಸಿದರು.
ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಜಪಾನಿನ ನಜೊಮಿ ಒಕುಹಾರಾ ಅವರನ್ನು ಎದುರಿಸಲಿದ್ದಾರೆ. ಒಕುಹಾರ ವಿರುದ್ಧ ಮುಖಾಮುಖೀಯಲ್ಲಿ 8-4 ಗೆಲುವಿನ ದಾಖಲೆ ಹೊಂದಿರುವ ಸೈನಾ 2018ರ ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್ ಓಪನ್ ಕೂಟಗಳಲ್ಲಿ ಸತತ ಗೆಲುವು ದಾಖಲಿಸಿದ್ದಾರೆ. ಒಂದು ವೇಳೆ ಒಕುಹಾರಾ ಅವರನ್ನು ಸೋಲಿಸಿ ಮುನ್ನಡೆದರೆ ಸೆಮಿಫೈನಲ್‌ನಲ್ಲಿ ಸೈನಾಗೆ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಎದುರಾಗುವ ಸಾಧ್ಯತೆ ಇದೆ.
ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕೆ. ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 23-21, 8-21, 21-18 ಅಂತರದಿಂದ ಜಯಿಸಿದರು. ಮೊದಲ ಗೇಮ್ ಅನ್ನು ಕಷ್ಟದಿಂದ ಗೆದ್ದ ಶ್ರೀಕಾಂತ್ ದ್ವಿತೀಯ ಗೇಮ್‌ನಲ್ಲಿ ಭಾರೀ ಅಂತರದ ಸೋಲನುಭವಿಸಿದರು. ಅಂತಿಮ ಗೇಮ್‌ನಲ್ಲಿ ವಾಂಗ್ ಹೆಚ್ಚಿನ ಪೈಪೋಟಿ ನೀಡಿದರೂ ಶ್ರೀಕಾಂತ್ ದಿಟ್ಟ ಹೋರಾಟವೊಂದನ್ನು ಸಂಘಟಿಸಿದರು. ಮುಂದಿನ ಪಂದ್ಯದಲ್ಲಿ ಕೊರಿಯಾದ ಸನ್ ವಾನ್ ಹೊ ಅವರನ್ನು ಎದುರಿಸಲಿದ್ದಾರೆ.
ಕಶ್ಯಪ್, ಡಬಲ್ಸ್ ಜೋಡಿ ಪರಾಭವ
ಪುರುಷರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಇಂಡೋನೇಶ್ಯದ ಆ್ಯಂಟನಿ ಸಿನಿಸುಕ ವಿರುದ್ಧ 17-21, 23-25ರಿಂದ ಎಡವಿರು.
ವನಿತಾ ಡಬಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಇಂಡೋನೇಶ್ಯದ ನೀ ಕೆಟುಟ್ ಮಹಾದೇವಿ-ರಿಂಕಿ ಅಮೇಲಿಯಾ ವಿರುದ್ಧ 18-21, 17-21 ಗೇಮ್‌ಗಳಿಂದ ಸೋಲುಭವಿಸಿದರು.