ಬೆಂಗಳೂರು: ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸಿದ್ದು, ಎಂಎಸ್‌ಐಎಲ್ ಅಷ್ಟೇ ಅಲ್ಲದೆ ಖಾಸಗಿಯವರೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸ್ಯಾಂಡ್ ಡೀಲರ್ ಪರವಾನಗಿ ಪಡೆಯಬೇಕಾಗುತ್ತದೆ. ಜತೆಗೆ ಮಲೇಷ್ಯಾದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿರುವವರ ಬಳಿ ಕೇಂದ್ರ ಸರ್ಕಾರದ ಬಿಐಎಸ್ ದೃಢೀಕರಣ ಪ್ರಕಾರವೇ ಮರಳು ಆಮದು ಮಾಡಿಕೊಳ್ಳಬೇಕು. ನಂತರ ರಾಜ್ಯ ಸರ್ಕಾರದಿಂದ ಐದು ರೀತಿಯ ಪ್ರಮಾಣ ಪತ್ರ ಪಡೆಯಬೇಕು. ಪ್ರತಿ ಟನ್‌ಗೆ 60 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಆ ನಂತರ ಖಾಸಗಿಯವರಿಗೆ ಮಾರಾಟ ಮಾಡಲು ಅವಕಾಶ ಸಿಗಲಿದೆ. ಖಾಸಗಿಯವರಿಗೆ ಮರಳು ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದರಿಂದ ಕಡಿಮೆ ದರದಲ್ಲಿ ಮರಳು ಸಿಗಲಿದೆ ಎಂದು ವಾಣಿಜ್ಯ ಇಲಾಖೆ ಕಾರ್ಯದರ್ಶಿ (ಗಣಿ, ಸೂಕ್ಷ, ಸಣ್ಣ ಹಾಗೂ ಮಧ್ಯಮ ಉದಿÂಮೆ) ರಾಜೇಂದ್ರಕುಮಾರ್ ಕಠಾರಿಯಾ ತಿಳಿಸಿದರು. ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವ ಮರಳು ಇಲ್ಲಿನ ಪರಿಸರಕ್ಕೆ ಹಾನಿಯಾಗದಂತೆ ಎಲ್ಲ ರೀತಿಯ ದೃಢೀಕರಣ ಪಡೆದ ನಂತರವೇ ಗ್ರಾಹಕರಿಗೆ ಮಾರಾಟವಾಗಲಿದೆ. ಈ ಬಗ್ಗೆ ಪರಿಸರವಾದಿಗಳು ಆತಂಕಪಡಬೇಕಿಲ್ಲ ಎಂದು ಹೇಳಿದರು.
ಪ್ರಸ್ತುತ ನಮಗೆ ವಾರ್ಷಿಕ 25 ರಿಂದ 26 ದಶಲಕ್ಷ ಮೆಟ್ರಿಕ್ ಟನ್ ಮರಳು ಅಗತ್ಯವಿದ್ದು 5 ರಿಂದ 6 ಟನ್ ನದಿ ಮೂಲದಿಂದ ಲಭ್ಯವಾಗುತ್ತಿದೆ. ಉಳಿದದ್ದು ಎಂ.ಸ್ಯಾಂಡ್‌ನಿಂದ ದೊರೆಯುತ್ತಿದೆ. ಇದೀಗ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡರೆ ನಮ್ಮ ಪರಿಸರವೂ ಸಂರಕ್ಷಣೆಯಾಗಲಿದೆ ಎಂದು ತಿಳಿಸಿದರು.
ಮರಳು ಆಮದು ಕುರಿತು ಕಾಯ್ದೆಗೆ ತಿದ್ದುಪಡಿ ತಂದು ರೂಪಿಸಿರುವ ಮಾರ್ಗಸೂಚಿ ಬುಧವಾರ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವ ಮರಳು ಜನವರಿ ಮಾಸಾಂತ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಎಂಎಸ್‌ಐಎಲ್ 50 ಕೆಜಿ ಬ್ಯಾಗ್‌ಗೆ 195 ರೂ. ದರದಲ್ಲಿ ಮಾರಾಟ ಮಾಡಲಿದೆ. ಮಲೇಷ್ಯಾದಿಂದ ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರಿಗೆ ಮರಳು ಆಗಮಿಸಲಿದ್ದು ಅಲ್ಲಿಂದ ಕರ್ನಾಟಕಕ್ಕೆ ರಸ್ತೆ ಮೂಲಕ ಸಾಗಣೆ ಮಾಡಿಕೊಳ್ಳಲಾಗುವುದು. ಈ ನಡುವೆ ಮಂಗಳೂರು ಬಂದರು ಮೂಲಕ ಕರ್ನಾಟಕಕ್ಕೆ ಮರಳು ತರಲಾಗಿದೆ.