Advertisement

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಮುಂದೂಡಿಕೆ : ಸೈನಾ, ಶ್ರೀಕಾಂತ್‌ಗೆ ಟೋಕಿಯೊ ಮಾರ್ಗ ಬಂದ್‌

11:27 PM May 07, 2021 | Team Udayavani |

ಹೊಸದಿಲ್ಲಿ: ಒಲಿಂಪಿಕ್ಸ್‌ ಅರ್ಹತೆ ಪಡೆಯುವಲ್ಲಿ ಕೊನೆಯ ಹಂತದ ಟೂರ್ನಿಯಾಗಿದ್ದ “ಮಲೇಶ್ಯ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಪಂದ್ಯಾವಳಿ’ಯನ್ನು ಕೋವಿಡ್‌ ಕಾರಣದಿಂದ ಮುಂದೂಡಲಾಗಿದೆ. ಇದರಿಂದ ಭಾರತದ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಸೇರಿದಂತೆ ಅನೇಕ ಶಟ್ಲರ್‌ಗಳ ಟೋಕಿಯೊ ಒಲಿಂಪಿಕ್ಸ್‌ ಪ್ರವೇಶದ ಕನಸು ಬಹುತೇಕ ಭಗ್ನಗೊಂಡಿದೆ.

Advertisement

600,000 ಡಾಲರ್‌ ಬಹುಮಾನ ಮೊತ್ತದ ಈ ಪಂದ್ಯಾವಳಿ ಮೇ 25ರಿಂದ 30ರ ತನಕ ಕೌಲಾಲಂಪುರದಲ್ಲಿ ನಡೆಯಬೇಕಿತ್ತು.

“ಬಿಡಬ್ಲ್ಯುಎಫ್ ಹಾಗೂ ಸಂಘ ಟಕರು ಈ ಕೂಟದ ಆಯೋಜನೆಗೆ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ಆದರೆ ಕೋವಿಡ್ ತೀವ್ರಗೊಳ್ಳುತ್ತಿರುವುದರಿಂದ ಇದನ್ನು ಮುಂದೂಡದೆ ಅನ್ಯ ಮಾರ್ಗವೇ ಇಲ್ಲವಾಗಿದೆ’ ಎಂದು ಬ್ಯಾಡ್ಮಿಂಟನ್‌ ವರ್ಲ್ಡ್ ಫೆಡರೇಶನ್‌ ಪ್ರಕಟನೆಯಲ್ಲಿ ತಿಳಿಸಿದೆ.

ಇದರ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು, ಆದರೆ ಒಲಿಂಪಿಕ್ಸ್‌ ಅರ್ಹತಾ ಅವಧಿಯ ಒಳಗೆ ನಡೆಯದು ಎಂದು ಬಿಡಬ್ಲ್ಯುಎಫ್ ಸ್ಪಷ್ಟಪಡಿಸಿದೆ.

ನಿರ್ಣಾಯಕ ಪಂದ್ಯಾವಳಿ :

Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ (ಮೇ 11-16) ಮುಂದೂಡಲ್ಪಟ್ಟ ಬಳಿಕ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಲು ಮಲೇಶ್ಯ ಓಪನ್‌ ಪಂದ್ಯಾವಳಿಯೇ ನಿರ್ಣಾಯಕವಾಗಿತ್ತು. ಅನಂತರ ಸಿಂಗಾಪುರ್‌ ಓಪನ್‌ (ಜೂ. 1-6) ನಡೆಯುವುದಿದೆ. ಆದರೆ ಭಾರತದ ಎಲ್ಲ ವಿಮಾನಗಳನ್ನೂ ಸಿಂಗಾಪುರ ರದ್ದುಗೊಳಿಸಿದೆ. ಬೇರೆ ಮಾರ್ಗದಿಂದ ಸಿಂಗಾಪುರ ತಲುಪಿದರೂ ಅಲ್ಲಿನ ನಿಯಮಾವಳಿಯಂತೆ 21 ದಿನಗಳ ಕಠಿನ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಾಗದು.

ಸೈನಾ, ಶ್ರೀಕಾಂತ್‌ ಅವರಂತೆ ವನಿತಾ ಡಬಲ್ಸ್‌ ಜೋಡಿಯಾಗಿರುವ ಎನ್‌. ಸಿಕ್ಕಿ ರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಅವರ ಒಲಿಂಪಿಕ್ಸ್‌ ಪ್ರವೇಶಕ್ಕೂ ಹಿನ್ನಡೆಯಾಗಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿರುವ ಭಾರತೀಯರೆಂದರೆ ಪಿ.ವಿ. ಸಿಂಧು, ಬಿ. ಸಾಯಿ ಪ್ರಣೀತ್‌ ಮತ್ತು ಪುರುಷರ ಡಬಲ್ಸ್‌ ಜೋಡಿಯಾಗಿರುದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next