ಜಕಾರ್ತಾ: ಏಷ್ಯನ್ ಕಪ್ ಹಾಕಿ ಕೂಟದ ಸೂಪರ್ 4 ಕಾದಾಟದಲ್ಲಿ ರವಿವಾರ ಭಾರತವು ಮಲೇಶ್ಯ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದೆ.
ಇದರಿಂದಾಗಿ ಭಾರತವು ಪ್ರಶಸ್ತಿ ಸುತ್ತಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.
ರಝೀ ರಹೀಮ್ ಅವರ ಹ್ಯಾಟ್ರಿಕ್ ಗೋಲಿನಿಂದಾಗಿ ಮಲೇಶ್ಯ ತಂಡವು ಡ್ರಾ ಸಾಧಿಸಲು ಯಶಸ್ವಿಯಾಯಿತು.
ರಹೀಮ್ ಪಂಧ್ಯದ 12ನೇ, 21ನೇ ಮತ್ತು 56ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದ್ದರು.
ಎರಡು ಗೋಲು ಹಿನ್ನೆಡೆಯಿದ್ದರೂ ಅಮೋಘ ಆಟದ ಪ್ರದರ್ಶನ ನೀಡಿದ್ದ ಭಾರತವು ವಿಷ್ಣುಕಾಂತ್ ಸಿಂಗ್ (32ನೇ ), ಎಸ್.ವಿ. ಸುನೀಲ್ (53ನೇ) ಮತ್ತು ನಿಲಮ್ ಸಂಜೀಪ್ ಕ್ಸೆಸ್ (55ನೇ) ಅವರ ಮೂಲಕ ಗೋಲು ದಾಖಲಿಸಿ ಡ್ರಾ ಸಾಧಿಸಿತು. ಭಾರತ ಸೂಪರ್ 4ರ ಹಂತದ ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತ್ತು.
ಸೂಪರ್ 4 ಹಂತದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯವು ಜಪಾನ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ. ದಕ್ಷಿಣ ಕೊರಿಯ ಮೊದಲ ಪಂದ್ಯದಲ್ಲಿ ಮಲೇಶ್ಯ ವಿರುದ್ಧ 2-2 ಡ್ರಾ ಸಾಧಿಸಿತ್ತು. ಸೂಪರ್ 4 ಅಂಕಪಟ್ಟಿಯಲ್ಲಿ ಸದ್ಯ ದಕ್ಷಿಣ ಕೊರಿಯ ಅಗ್ರಸ್ಥಾನದಲ್ಲಿದ್ದರೆ ಭಾರತ ದಿÂತೀಯ ಸ್ಥಾನದಲ್ಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಜಪಾನ್ ಹೊರಬಿದ್ದಿದೆ.