ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಬೈಸಿಕಲ್ ನಿಲ್ದಾಣ (ಪಬ್ಲಿಕ್ ಬೈಸಿಕಲ್ ಶೇರಿಂಗ್-ಪಿಬಿಎಸ್)ಗಳಲ್ಲಿ ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾದ ವಿಶಿಷ್ಟವಾದ ಅತ್ಯಾಧುನಿಕ ಬೈಸಿಕಲ್‌ಗಳನ್ನು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.
ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಪಿಬಿಎಸ್ ಸಾಕಾರಗೊಳಿಸಲು ಹು-ಧಾ ಅವಳಿ ನಗರದಲ್ಲಿ 34 ಬೈಸಿಕಲ್ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ ಎಂಟು ಕಡೆ ಪ್ರಾಯೋಗಿಕವಾಗಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಜತೆಗೆ ಈಗಾಗಲೇ ಮಲೇಷ್ಯಾದಿಂದ 340 ವಿಶಿಷ್ಟವಾದ ಅತ್ಯಾಧುನಿಕ ಬೈಸಿಕಲ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ.
ಪಿಬಿಎಸ್‌ಗಳು ಸಮರ್ಪಕವಾಗಿ ಕಾರ್ಯಗತವಾದರೆ ಹು-ಧಾದ ಇನ್ನುಳಿದೆಡೆಯೂ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಹುಬ್ಬಳ್ಳಿಯ ಟ್ರಿನಿಟಿ ಟೆಕ್ನಾಲಜಿಯವರು ಬೈಸಿಕಲ್ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದಿದ್ದಾರೆ. ವಿಶಿಷ್ಟವಾದ ಅತ್ಯಾಧುನಿಕ ಬೈಸಿಕಲ್‌ಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲಾದ ಪಿಬಿಎಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕ ತಪಾಸಣೆ ನಡೆಸುತ್ತಿದ್ದಾರೆ.
ಈ ಬೈಸಿಕಲ್‌ಗಳು ನಿಲ್ದಾಣಗಳಲ್ಲಿ ಸೆಟ್ ಆಗುತ್ತಿವೆಯೋ ಇಲ್ಲವೋ, ಸಾಫ್ಟವೇರ್‌ನ ಆ್ಯಪ್ ವ್ಯವಸ್ಥೆಯಲ್ಲಿ ಕೀ ಲಾಕ್ ಮತ್ತು ಅನ್‌ಲಾಕ್ ಆಗುತ್ತಿದೆಯೋ ಇಲ್ಲವೋ, ಜಿಪಿಎಸ್ ವರ್ಕ್‌ಔಟ್ ಆಗುತ್ತಿದೆಯೋ ಇಲ್ಲವೋ, ಲಾಕಿಂಗ್ ಸಮರ್ಪಕವಾಗಿ ಆಗುತ್ತಿದೆಯೋ ಎಂಬುದನ್ನು ಪರೀಕ್ಷಿಸಿದರು.
ಎಂಟು ಕಡೆ ಪ್ರಾಯೋಗಿಕ ನಿಲ್ದಾಣಗಳು: ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಚೇತನ ಸ್ಕೂಲ್ ಎದುರು, ಶ್ರೇಯಾ ಪಾರ್ಕ್ ತೋಳನಕೆರೆ ಬಳಿ, ಗೋಕುಲ ರಸ್ತೆ ಕೆಇಸಿ ಬಳಿ, ರಾಮಲಿಂಗೇಶ್ವರ ನಗರ ವೃತ್ತ, ಕೈಗಾರಿಕಾ ವಸಾಹತು ಪ್ರದೇಶ ಗೇಟ್ ನಂ. 1, ತತ್ವದರ್ಶ ಆಸ್ಪತ್ರೆ ಎದುರು, ಉಣಕಲ್ ಕೆರೆ ಕ್ಯಾಂಟೀನ್ ಬಳಿ ಸೇರಿ ಎಂಟು ಸ್ಥಳಗಳಲ್ಲಿ ಬೈಸಿಕಲ್ ನಿಲ್ದಾಣಗಳು ಸ್ಥಾಪನೆಯಾಗಿವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಎಂಟು ಕಡೆ ಪ್ರಾಯೋಗಿಕವಾಗಿ ಪಬ್ಲಿಕ್ ಬೈಸಿಕಲ್ ಶೇರಿಂಗ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದ್ದು, ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾದ ಬೈಸಿಕಲ್‌ಗಳನ್ನು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ತಪಾಸಣೆ ಮಾಡುವ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಡಿಸೆಂಬರ್ ಇಲ್ಲವೆ ಜನವರಿ ತಿಂಗಳಲ್ಲಿ ಈ ಬೈಸಿಕಲ್‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಬಹುದು.
-ಚನ್ನಬಸವರಾಜ ಧರ್ಮಂತಿ, ಹು-ಧಾ ಸ್ಮಾರ್ಟ್ ಸಿಟಿ ಡಿಜಿಎಂ