Advertisement

ಖ್ಯಾತ ಮಲಯಾಳ ಚಿತ್ರ ನಿರ್ದೇಶಕ ತಂಬಿ ಕನ್ನಂತನಮ್‌ ನಿಧನ 

02:05 AM Oct 03, 2018 | Karthik A |

ಕೊಚ್ಚಿ: ಖ್ಯಾತ ಮಲಯಾಳ ಚಿತ್ರ ನಿರ್ದೇಶಕ ಮತ್ತು ಚಿತ್ರ ಕತೆಗಾರ ತಂಬಿ ಕನ್ನಂತನಮ್‌ ಅವರು ಮಂಗಳವಾರ ಅಪರಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ನಟ ಮೋಹನ್‌ಲಾಲ್‌ ಅವರನ್ನು ಉನ್ನತ ನಾಯಕರ ಸಾಲಿಗೆ ಕೊಂಡೊಯ್ದಿದ್ದ ‘ರಾಜಾವಿಂಟೆ ಮಕನ್‌’ (1986) ಚಿತ್ರದಿಂದ ತಂಬಿ ಖ್ಯಾತರಾಗಿದ್ದರು. ಈ ಚಿತ್ರ ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುವುದರೊಂದಿಗೆ ತಂಬಿ ಮಲಯಾಳ ಚಿತ್ರರಂಗದಲ್ಲಿ ಓರ್ವ ನಿರ್ದೇಶಕರಾಗಿ ತನ್ನ ಛಾಪನ್ನು ಮೂಡಿಸಿದರು ಮತ್ತು ಹಿಟ್‌ ಚಿತ್ರಗಳನ್ನು ನೀಡುತ್ತ ಸಾಗಿದರು. ಅವರ ಇತರ ಪ್ರಮುಖ ಚಿತ್ರಗಳೆಂದರೆ “ವಳಿಯೋರಕ್ಕಝಕಲ್‌’, “ಭೂಮಿಯಿಲೆ ರಾಜಕ್ಕನ್ಮರ್‌’, “ಇಂದ್ರಜಾಲಂ’, “ನಾಡೋಡಿ’, “ಚುಕ್ಕನ್‌’ ಮತ್ತು “ಮಾಂತ್ರಿಕಮ್‌’.

Advertisement

ತಂಬಿ ಅವರು ಒಟ್ಟು 15 ಚಿತ್ರಗಳನ್ನು ನಿರ್ದೇಶಿಸಿದ್ದರು ಮತ್ತು ಮೂರು ಚಿತ್ರಗಳಿಗೆ ಕತೆಯನ್ನು ಬರೆದಿದ್ದರು. ಈ ಮೂರು ಚಿತ್ರಗಳೆಂದರೆ “ಆ ನೇರಂ ಅಲ್ಪ ದೂರಂ’, “ಜನ್ಮಾಂತರಮ್‌’ ಮತ್ತು “ಫ್ರೀಡಂ’. ಅಲ್ಲದೆ ಅವರು ಐದು ಚಿತ್ರಗಳನ್ನು ನಿರ್ಮಿಸಿದ್ದರು. 1953ರಲ್ಲಿ ಕೋಟ್ಟಯಂ ಜಿಲ್ಲೆಯ ಕಾಂಜಿರಪಲ್ಲಿಯಲ್ಲಿ ಜನಿಸಿದ್ದ ತಂಬಿ ಅವರು “ಅತ್ತಿಮಾರಿ’ ಮತ್ತು “ಒಲಿವರ್‌ ಟ್ವಿಸ್ಟ್‌’ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದರು.

ತಂಬಿ ಅವರು ನಿರ್ದೇಶಕರಾದ ಶಶಿಕುಮಾರ್‌ ಮತ್ತು ಜೋಷಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 1983ರಲ್ಲಿ ಅವರ ನಿರ್ದೇಶನದ ಮೊದಲ ಚಿತ್ರ “ತಾವಲಂ’ ತೆರೆ ಕಂಡಿತ್ತು. ಅವರ ನಿರ್ದೇಶನದ ಕೊನೆಯ ಚಿತ್ರ “ಫ್ರೀಡಂ’ 2004ರಲ್ಲಿ ಬಿಡುಗಡೆಗೊಂಡಿತ್ತು. ತಂಬಿ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next