ಜೋರ್ಡಾನ್:ಮಲಯಾಳಂ ಸಿನಿಮಾ ನಿರ್ದೇಶಕ ಬ್ಲೇಸೈ, ಸ್ಟಾರ್ ನಟ ಪ್ರಥ್ವಿರಾಜ್ ಸುಕುಮಾರನ್ ಸೇರಿದಂತೆ ಚಿತ್ರತಂಡದ 58 ಮಂದಿ ಕೋವಿಡ್ 19 ಹರಡುವಿಕೆಯ ಭಯದಿಂದ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಜೋರ್ಡಾನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪ್ರಥ್ವಿರಾಜ್ ಅಭಿನಯದ “ಆದುಜೀವಿತಂ” ಸಿನಿಮಾದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಜೋರ್ಡಾನ್ ಗೆ ತೆರಳಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಇಡೀ ತಂಡ ಶೂಟಿಂಗ್ ಇಲ್ಲದೇ ಜೋರ್ಡಾನ್ ನಲ್ಲಿಯೇ ಉಳಿಯುವಂತಾಗಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಅನಿವಾಸಿ ಕೇರಳಿಯರ ಇಲಾಖೆ ಗುರುವಾರ ಜೋರ್ಡಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಮಲಯಾಳಂ ಸಿನಿಮಾ ನಟ ಪ್ರಥ್ವಿರಾಜ್ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೇಸೈ ಮತ್ತು ಸಿಬ್ಬಂದಿಗಳ ಬಗ್ಗೆ ವಿಚಾರಿಸಿರುವುದಾಗಿ ವರದಿ ವಿವರಿಸಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅನಿವಾಸಿ ಕೇರಳಿಯರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ, ಜೋರ್ಡಾನ್ ನಲ್ಲಿರುವ ಭಾರತೀಯ ರಾಯಭಾರಿ ಜತೆ ಮಾತನಾಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳುವಂತೆ ಸೂಚಿಸಿದ್ದರು.
ರಾಯಭಾರಿ ಕಚೇರಿ ಸಿನಿಮಾ ನಿರ್ದೇಶಕ, ನಟ ಪ್ರಥ್ವಿರಾಜ್ ಬಗ್ಗೆ ಮಾಹಿತಿ ಕಲೆ ಹಾಕಿ ಎಲ್ಲರೂ ಸುರಕ್ಷಿತರಾಗಿರುವುದಾಗಿ ಮಾಹಿತಿ ನೀಡಿದೆ. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಚಿತ್ರೀಕರಣದಿಂದ ದೂರ ಉಳಿಯುವುದಾಗಿ ಚಿತ್ರ ನಿರ್ದೇಶಕ ತಿಳಿಸಿದ್ದಾರೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ ನಂತರ ಸಿನಿಮಾ ಚಿತ್ರೀಕರಣ ಮುಂದುವರಿಸುವುದಾಗಿ ಹೇಳಿದೆ.
ಬ್ಲೇಸೈ ನಿರ್ದೇಶನದ “ಅದುಜೀವಿತಂ” ಸಿನಿಮಾದಲ್ಲಿ ಪ್ರಥ್ವಿರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಜೋರ್ಡಾನ್ ನಲ್ಲಿ 212 ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಕೋವಿಡ್ 19 ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಈವರೆಗೆ ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ.