ಕೊಲ್ಲಂ: ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕನಾಗಿ ಮಿಂಚಿದ್ದ ನಟ ಕುಂದರ ಜಾನಿ (71) ವಿಧಿವಶರಾಗಿದ್ದಾರೆ.
ಮಂಗಳವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕೊಲ್ಲಂ ಚಿನ್ನಕಡ ಎಂಬಲ್ಲಿ ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಇಂದು(ಬುಧವಾರ) ಬೆಳಗ್ಗೆ 9.30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲ ಮಾಹಿತಿ ನೀಡಿದ್ದಾರೆ.
ಜಾನಿ ಅವರು 1979 ರಲ್ಲಿ ತಮ್ಮ 23 ನೇ ವಯಸ್ಸಿನಲ್ಲಿ ನಿತ್ಯ ವಸಂತಂ ಚಿತ್ರದ ಮೂಲಕ ರಂಗ ಪ್ರವೇಶಿಸಿದರು. ಮೀನ್, ಪರಂಗಿಮಾಲ, ಕರಿಂಬನ, ಗಾಡ್ ಫಾದರ್, ಕಿರ್ಯಾತಂ, ರಾಜದಂಡ, ನಾಟೋಟಿಕಾಟ್, ದಾದಾಸಾಹಿಬ್, ಭರತಚಂದ್ರನ್ ಐಪಿಎಸ್, ಕುಟ್ಟಿಸ್ರಾಂಕ್ ಮತ್ತು ಒರು ವಡ್ಕನ್ ವೀರಗಾಥ ಮುಂತಾದ ಚಿತ್ರಗಳಲ್ಲಿನ ಅವರ ಪಾತ್ರಗಳು ಗಮನಸೆಳೆದಿತ್ತು. ಜಾನಿ ಅವರು ಕೊನೆಯದಾಗಿ 2022 ರಲ್ಲಿ ಮೆಪ್ಪಾಡಿಯನ್ ಚಿತ್ರದಲ್ಲಿ ನಟಿಸಿದರು.
44 ವರ್ಷಗಳ ಚಿತ್ರರಂಗದ ಅವಧಿಯಲ್ಲಿ ಜಾನಿ ಅವರು ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳು ಸೇರಿದಂತೆ ದೂರದರ್ಶನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಕಾಟಪ್ಪಕದ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಕುಂದರದಲ್ಲಿರುವ ಅವರ ಮನೆಗೆ ಕರೆದೊಯ್ಯಲಾಗುತ್ತದೆ. ಅಂತ್ಯಕ್ರಿಯೆ ಗುರುವಾರ ಕಾಂಜಿರೋಡ್‌ನ ಸಂತ ಅಂತೋನಿ ಚರ್ಚ್ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಟನ ಅಗಲಿಕೆಗೆ ಚಿತ್ರರಂಗ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಎರಡು ವಾರದ ಹಿಂದೆ ಸಹೋದರ ನಿಧನ:
ಕುಂದರ ಜಾನಿ ಅವರ ಸಹೋದರ ಅಲೆಕ್ಸ್ ಎರಡು ವಾರಗಳ ಹಿಂದೆಯಷ್ಟೇ ನಿಧನರಾಗಿದ್ದರು ಇದರ ನೋವಲ್ಲೇ ಇದ್ದ ಮನೆಮಂದಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಇದನ್ನೂ ಓದಿ: Airstrike: ಗಾಜಾ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ… ಕನಿಷ್ಠ 500 ಮಂದಿ ಮೃತ್ಯು