Advertisement

ಮಲಯಾಳಂ ಕಲಾವಿದರ ಸಂಘಕ್ಕೆ ಮತ್ತೆ ದಿಲೀಪ್‌; ಕನ್ನಡ ಚಿತ್ರರಂಗ ವಿರೋಧ

12:53 PM Jul 02, 2018 | Sharanya Alva |

ನಟಿಯೊಬ್ಬಳ ಕಿಡ್ನಾಪ್‌ ಹಾಗೂ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿ ಉಚ್ಛಾಟನೆಗೊಂಡಿದ್ದ ಮಲಯಾಳಂ ನಟ ದಿಲೀಪ್‌ಕುಮಾರ್‌ನನ್ನು ಪುನಃ ಮಲಯಾಳಂ ಕಲಾವಿದರ ಸಂಘಕ್ಕೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಮಲಯಾಳಂ ನಟಿಯೊಬ್ಬಳ ಕಿಡ್ನಾಪ್‌ ಹಾಗು ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟ ದಿಲೀಪ್‌ಕುಮಾರ್‌ ಅವರನ್ನು ಮಲಯಾಳಂ ಕಲಾವಿದರ ಸಂಘದಿಂದ ಅಮಾನತುಗೊಳಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ದಿಲೀಪ್‌ಕುಮಾರ್‌ ಅವರನ್ನು ಸಂಘಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಈ ಕ್ರಮದಿಂದ ಮಲಯಾಳಂ ನಟಿಯರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕನ್ನಡದ ನಟ, ನಟಿಯರೂ ಬೆಂಬಲಿಸಿದ್ದಾರೆ.

Advertisement

ಈ ಕುರಿತು “ಫೈರ್‌’ “ಫಿಲ್ಮ್ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಈಕ್ವಾಲಿಟಿ’ ಹೆಸರಿನ ಸಂಘಟನೆ ಮೂಲಕ ಈಗಾಗಲೇ ಮಲಯಾಳಂ ಕಲಾವಿದರ ಸಂಘಕ್ಕೆ ಕನ್ನಡದ 50 ನಟ, ನಟಿಯರ ಸಹಿವುಳ್ಳ ಪತ್ರವನ್ನು ರವಾನಿಸಲಾಗಿದೆ. ಈ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ನಟಿ ಶ್ರುತಿಹರಿಹರನ್‌, “ಮಲಯಾಳಂ ನಟಿಯ ಕಿಡ್ನಾಪ್‌, ಕಿರುಕುಳ ಪ್ರಕರಣದಲ್ಲಿ ದಿಲೀಪ್‌ ಅವರು ಆರೋಪಿಯಾಗಿದ್ದು, ಅವರನ್ನು ಅಲ್ಲಿನ ಕಲಾವಿದರ ಸಂಘದಿಂದ ಅಮಾನತು ಮಾಡಲಾಗಿತ್ತು. ಆದರೆ, ಈಗ ಏಕಾಏಕಿ ಸಭೆ ನಡೆಸಿ ಅವರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸುವ ಶ್ರುತಿಹರಿಹರನ್‌, ನಟ ದಿಲೀಪ್‌ ಮೇಲಿನ ಪ್ರಕರಣ ಇನ್ನೂ ಬಗೆಹರಿದಿಲ್ಲ. ಅವರು ನಿರ್ದೋಷಿ ಎಂದು ತೀರ್ಮಾನವಾದ ಬಳಿಕ ಸಂಘಕ್ಕೆ ಸೇರಿಸಿಕೊಳ್ಳಲಿ’ ಎಂದು ಹೇಳಿದ್ದಾರೆ.

ಇದು ಕೇವಲ ಚಿತ್ರರಂಗದ ಪ್ರಕರಣ ಮಾತ್ರವಲ್ಲ, ಯಾವುದೇ ಕ್ಷೇತ್ರದ ಮಹಿಳೆಯರಿಗೆ ಅನ್ಯಾಯವಾದರೂ, ಮಹಿಳೆಯರು ಧ್ವನಿ ಎತ್ತಬೇಕು. ಇಲ್ಲವಾದರೆ, ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ, ದೌರ್ಜನ್ಯ ನಡೆಯುತ್ತಲೇ ಇರುತ್ತೆ. ಮಹಿಳೆ ಯಾವುದೇ ರಂಗದಲ್ಲಿ ಕೆಲಸ ಮಾಡಿದರೂ ಅವಳಿಗೆ ಸುರಕ್ಷತೆ ಬೇಕು. ಅಲ್ಲಿ ಅನ್ಯಾಯ ನಡೆದರೆ, ಯಾರು ಅವಳ ಪರ ನಿಲ್ಲುತ್ತಾರೆ. ಈಗ ಮಲಯಾಳಂ ನಟಿಗೆ ಅನ್ಯಾಯವಾಗಿದೆ. ಅವಳಿಗೆ ನ್ಯಾಯ ಸಿಗಬೇಕು. ಹಾಗಾಗಿ, ಆರೋಪಿ ಪ್ರಕರಣದಿಂದ ನಿರ್ದೋಷಿ ಅಂತ ಸಾಬೀತಾಗುವವರೆಗೆ ಯಾವುದೇ ಕಾರಣಕ್ಕೂ ಸಂಘಕ್ಕೆ ಸೇರಿಸಿಕೊಳ್ಳಬಾರದು ಎಂದು ಕನ್ನಡದ ನಟ,ನಟಿಯರು ಸಹಿ ಮಾಡುವ ಮೂಲಕ ಒತ್ತಾಯ ಮಾಡಿದ್ದೇವೆ ಎನ್ನುತ್ತಾರೆ ಶ್ರುತಿಹರಿಹರನ್‌.

ನಮಗೆ ಸಮಾಜದ ಮೇಲೆ ಭರವಸೆ ಇದೆ. ಈಗಷ್ಟೇ ಒಂದಷ್ಟು ಸಮಾನ ಮನಸ್ಕರು ಸೇರಿ “ಫೈರ್‌’ “ಫಿಲ್ಮ್ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಈಕ್ವಾಲಿಟಿ’ ಸಂಘಟನೆ ಹುಟ್ಟುಹಾಕಿದ್ದೇವೆ. “ಆ ದಿನಗಳು’ ಚೇತನ್‌ ಜೊತೆ ಚರ್ಚಿಸಿ ಹೀಗೊಂದು ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿದ ನಟ,ನಟಿಯರು ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಘಟನೆ ಮಹಿಳೆ ಪರ, ಹೋರಾಟಕ್ಕಿಳಿಯಲಿದೆ ಎಂಬುದು ಶ್ರುತಿಹರಿಹರನ್‌ ಮಾತು. 

ಅಂದಹಾಗೆ, ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಟ,ನಟಿಯರಾಗಿರುವ ಕವಿತಾ ಲಂಕೇಶ್‌, ಪ್ರಕಾಶ್‌ ರಾಜ್‌, ರೂಪಾ ಅಯ್ಯರ್‌, ರಕ್ಷಿತ್‌ ಶೆಟ್ಟಿ, ಸೋನು ಗೌಡ, ಶ್ರದ್ಧಾ ಶ್ರೀನಾಥ್‌, ದಿಗಂತ್‌, ರೂಪ ನಟರಾಜ್‌, ಮೇಘನಾ ರಾಜ್‌, ಐಂದ್ರಿತಾ ರೇ, ಯೋಗರಾಜ್‌ ಭಟ್‌, ಸಂಗೀತಾ ಭಟ್‌, ಕಾವ್ಯಾ ಶೆಟ್ಟಿ, ಸಂಯುಕ್ತ ಹೊರನಾಡು, ಬಿ.ಎಂ.ಗಿರಿರಾಜ್‌, ಜಾಕ್‌ ಮಂಜು, ಸಿಂಧು ಲೋಕನಾಥ್‌, ಭಾವನಾ ರಾವ್‌, ಸುಧಾರಾಣಿ, ನಿವೇದಿತಾ, ಪೂಜಾಗಾಂಧಿ, ಮೇಘನಾ ಗಾಂವ್ಕರ್‌, ವೀಣಾ ಸುಂದರ್‌, ಮಾನ್ವಿತಾ ಹರೀಶ್‌, ಧನಂಜಯ್‌, ಲತಾ ಹೆಗ್ಡೆ, ನೀತು ಶೆಟ್ಟಿ, ಸಂಯುಕ್ತ ಹೆಗ್ಡೆ, ರಶ್ಮಿಕಾ ಮಂದಣ್ಣ, ಕವಿರಾಜ್‌, ವಿಜಯಮ್ಮ, ಹಿತ ಚಂದ್ರಶೇಖರ್‌, ರೇಖಾ ರಾಣಿ, ಪನ್ನಗಾಭರಣ ಸೇರಿದಂತೆ ಸುಮಾರು 50 ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸಹಿಹಾಕಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next