Advertisement
ಕಾಸರಗೋಡಿನ ಸರಕಾರಿ ಹೈಯರ್ ಸೆಕೆಂಡರಿ (ಪ್ಲಸ್ ಟು) ಶಾಲೆಗಳಲ್ಲಿ ನೇಮಕಗೊಳ್ಳುತ್ತಿರುವ ಹೆಚ್ಚಿನ ಶಿಕ್ಷಕರಿಗೆ ಕನ್ನಡ ತಿಳಿದಿಲ್ಲ. ಬೆರಳೆಣಿಕೆಯಲ್ಲಿರುವ ಕನ್ನಡಿಗ ಶಿಕ್ಷಕರು ಇಂಗ್ಲಿನಲ್ಲಿ ಬೋಧಿಸುತ್ತಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿರುವ ಮಲಯಾಳಿ ಶಿಕ್ಷಕರು ಇಂಗ್ಲಿಷಿನ ಬದಲು ಮಲಯಾಳದಲ್ಲಿ ಕಲಿಸುತ್ತಿದ್ದಾರೆ.
Related Articles
Advertisement
ಆದರೆ ಇದು ಅನ್ಯಾಯವೆಂದು ಯಾರಿಗೂ ತೋರುವುದಿಲ್ಲ. ಭಾಷಾ ಶಿಕ್ಷಕರು ಅದೇ ಭಾಷೆಗಳಲ್ಲಿ ಬೋಧಿಸಬೇಕೆಂಬ ನಿಯಮ ಪಾಲನೆಯಾಗುವಂತೆ ವಿದ್ಯಾಧಿಕಾರಿಗಳಾಗಲಿ ಮುಖ್ಯೋಪಾಧ್ಯಾಯರಾಗಲಿ ಶಿಕ್ಷಕ- ರಕ್ಷಕ ಸಂಘಟನೆಗಳಾಗಲೀ ಪ್ರಯತ್ನಿಸುವುದಿಲ್ಲ. ಆದರೆ ಒಂದೊಮ್ಮೆ ಇಂಗ್ಲಿಷ್ ಮೊದಲಾದ ಭಾಷಾ ವಿಷಯಗಳನ್ನು ಕಲಿಸಲು ನೇಮಕವಾಗುವ ಕನ್ನಡಿಗ ಶಿಕ್ಷಕರು ಮಲಯಾಳ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧಿಸಿದರೆ ಆ ಶಿಕ್ಷಕರ ಪರಿಸ್ಥಿತಿ ಏನಾಗಬಹುದು? ಎಂಬುದು ಊಹನಾತೀತ.
ಸಂಸ್ಕೃತ ಕಲಿಸಲು ಮಲಯಾಳ ಅಧ್ಯಾಪಕರು ನೇಮಕಗೊಂಡ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಸಂಸ್ಕೃತದ ಬದಲು ಕನ್ನಡವನ್ನು ಆರಿಸಿಕೊಂಡು ಮಲಯಾಳದ ಬಲವಂತ ಮಾಘಸ್ನಾನದಿಂದ ಪಾರಾಗಬಹುದು. ಆದರೆ ಇಂಗ್ಲಿಷ್, ಹಿಂದಿ ಯಂತಹ ಕಡ್ಡಾಯ ವಿಷಯಗಳಲ್ಲಿ ಏನು ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ.
ಭಾಷಾ ವಿಷಯಗಳನ್ನು ಅದೇ ಭಾಷೆಗಳಲ್ಲಿ ಕಲಿಸಬೇಕೆಂಬ ನಿಯಮವನ್ನು ಪಾಲಿಸಲು ಸಾಧ್ಯವಾಗದಿದ್ದರೆ ಕನ್ನಡ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಸಲು ಕನ್ನಡ ತಿಳಿದ ಅಧ್ಯಾಪಕರನ್ನೇ ನೇಮಿಸ ಬೇಕಾದುದು ನ್ಯಾಯೋಚಿತ.ಕನ್ನಡಿಗರದ್ದೂ ತಪ್ಪಿದೆ: ಕನ್ನಡಿಗರು ಆಡಳಿತ ವ್ಯವಸ್ಥಾಪಕರಾದ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ಭಾಷಾ ವಿಷಯ ಹಾಗೂ ಇತರ ವಿಷಯಗಳನ್ನು ಬೋಧಿಸಲು ಕನ್ನಡವೇ ತಿಳಿಯದ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಕಾಂಚಣದ ಪ್ರೇಮದೆದುರು ಕನ್ನಡಾಭಿಮಾನ ಮರೆಯಾಗುತ್ತದೆ. ಇದರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಬೇಕು. ಅರ್ಹರಾದ ಕನ್ನಡಿಗ ಶಿಕ್ಷಕರಿದ್ದೂ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೆತ್ತವರು ಸೇರಿಸಬಾರದು. ಹಾಗೆಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶಿಕ್ಷಣ ದೊರೆಯುವಂತೆ ಸರಕಾರ ನಿಯಮ ರೂಪಿಸಬೇಕು. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ತಿಳಿದ ಶಿಕ್ಷಕರಿಂದ ಕನ್ನಡದಲ್ಲೇ ಶಿಕ್ಷಣ ದೊರೆತರೆ ಮಾತ್ರ ಮಾತೃ ಭಾಷೆಯಲ್ಲಿ ಶಿಕ್ಷಣ ಎಂಬ ಧ್ಯೇಯ ನಿಜ ಅರ್ಥದಲ್ಲಿ ಸಾಕಾರಗೊಳ್ಳಬಹುದು.