Advertisement

ಕನ್ನಡ ಮಾಧ್ಯಮ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕ

06:25 AM Jul 28, 2018 | |

ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಮೇಲೆ ಆಳುವ ಸರಕಾರ ಮತ್ತೆಮತ್ತೆ ಗದಾಪ್ರಹಾರಗಳ ಮೂಲಕ ಸಾಂವಿಧಾನಿಕ ಹಕ್ಕನ್ನು ಚ್ಯುತಿಗೊಳಿಸಲು ಪ್ರಯತ್ನಿಸುತ್ತಿದ್ದು, ಕನ್ನಡಿಗರ ರಕ್ತವನ್ನು ಕುದಿಯುವಂತೆ ಮಾಡಿದೆ.

Advertisement

ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದ ಗಂಧಗಾಳಿ ತಿಳಿಯದ ಶಿಕ್ಷಕರನ್ನು ನೇಮಿಸುವ ಯತ್ನ ಮುಂದುವರಿಯುತ್ತಿದ್ದು, ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ (ಕುಕ್ಕಾರು ಶಾಲೆ) ಕನ್ನಡ ಮಾಧ್ಯಮ ಗಣಿತ ಶಿಕ್ಷಕ ತೆರವಿದ್ದ ಹುದ್ದೆಗೆ ಮಲೆಯಾಳ ಶಿಕ್ಷಕರನ್ನು ಸೋಮವಾರ ನೇಮಕಗೊಳಿಸಿ ದೆ.

ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೇ ತರಗತಿಯ ಕನ್ನಡ ಮಾಧ್ಯಮಗಳಲ್ಲಿ ಪ್ರತಿ ತರಗತಿಗಳಲ್ಲೂ ಎರಡೆರಡು ಡಿವಿಜನ್‌ ಗಳಿದ್ದು, 400‌ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿದ್ದಾರೆ. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಸಾಂವಿಧಾನಿಕ ಹಕ್ಕು ಮತ್ತು ಆದೇಶಗಳನ್ನು ಗಾಳಿಗೆ ತೂರಿ ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕರೋರ್ವರನ್ನು ನೇಮಕಗೊಳಿಸಿ ರುವುದು ವಿದ್ಯಾರ್ಥಿಗಳ ಭವಿಷ್ಯವನ್ನು ಘಾಸಿಗೊಳಿಸುವ ಭೀತಿ ಎದುರಾಗಿದೆ.

ವಿದ್ಯಾರ್ಥಿಗಳು ಅತಂತ್ರ : 
ಮಂಗಲ್ಪಾಡಿ ಸರಕಾರಿ ಶಾಲೆಯು ಶತಮಾನಗಳ ಹೊಸ್ತಿಲಲ್ಲಿರುವ  ವಿದ್ಯಾಸಂಸ್ಥೆಯಾಗಿದ್ದು, ಬಡ-ಮಧ್ಯಮ ವರ್ಗದ ವಿದ್ಯಾರ್ಜನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಶಾಲೆಯಲ್ಲಿ ಮಲೆಯಾಳ ಹಾಗೂ ಆಂಗ್ಲ ಮಾಧ್ಯಮಗಳಲ್ಲೂ ಶಿಕ್ಷಣ ಸೌಲಭ್ಯವಿದ್ದು, ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿರುವುದು ವಿಶೇಷ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕುಕ್ಕಾರು ಶಾಲೆಯೆಂದೇ ಪ್ರಸಿದ್ಧವಾಗಿರುವ ಈ ಪರಿಸರದ ಐಲ, ನಯಾಬಝಾರ್‌, ಮಲ್ಲಂಗೈ, ಬಂದ್ಯೋಡು, ಅಂಬಾರು ಪರಿಸರದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕಲಿಕಾವಕಾಶವಿರುವ ಶಾಲೆಯಾಗಿ ಗುರುತಿಸಿಕೊಂಡಿದೆ. ಮಲೆಯಾಳ ಶಿಕ್ಷಕರನ್ನು ನೇಮಕಗೊಳಿಸಿರುವುದರಿಂದ ಹೆತ್ತವರು ಆತಂಕಿತರಾಗಿದ್ದಾರೆ.

 ಕಾನೂನು ಬಾಹಿರ
ಗಡಿನಾಡಿಲ್ಲಿರುವ‌ ಭಾಷೆ  ಅಲ್ಪಸಂಖ್ಯಾಕ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಕಸಿಯುವಿಕೆ ಕಾನೂನುಬಾಹಿರವಾಗಿದ್ದು, ರಕ್ಷಕ -ಶಿಕ್ಷಕ ಸಮಿತಿ ಈ ಬಗ್ಗೆ ಹೋರಾಟದ ಹಾದಿ ತುಳಿಯಲಿದೆ. ಈಗಾಗಲೇ ಶಿಕ್ಷಣ ಉಪನಿರ್ದೇಶಕರು, ಜಿಲ್ಲಾ ವಿದ್ಯಾಧಿಕಾರಿ, ಸಹಾಯಕ ವಿದ್ಯಾಧಿಕಾರಿಗಳ ಸಹಿತ ಉನ್ನತ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಮನವಿ ನೀಡಲಾಗಿದೆ.
– ಬಾಲಕೃಷ್ಣ  ಅಂಬಾರು
ಅಧ್ಯಕ್ಷರು ರಕ್ಷಕ-ಶಿಕ್ಷ‌ಕರ ಸಂಘ ಮಂಗಲ್ಪಾಡಿ ಸರಕಾರಿ  ಪ್ರೌಢ ಶಾಲೆ

Advertisement

ಖಂಡನಾರ್ಹ
ಮಲೆಯಾಳ ಮಾತ್ರ ಬಲ್ಲ ಶಿಕ್ಷಕರನ್ನು ನೇಮಿಸಿರುವುದು ಖಂಡನಾರ್ಹ ಕನ್ನಡಿಗರ ಹಕ್ಕುಚ್ಯುತಿಗೊಳಿಸುವ ಯತ್ನಗಳನ್ನು  ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ವಿರೋಧ ವ್ಯಕ್ತಪಡಿಸುತ್ತಿದೆ. ಶಿಕ್ಷಣ ಹಕ್ಕನ್ನು ಹೊಸಕುವ ಯತ್ನಗಳಿಂದ ಸಂಬಂಧಪಟ್ಟವರು ಹಿಂದೆ ಸರಿಯಬೇಕು.
– ರವೀಂದ್ರನಾಥ್‌ ಕೆ. ಆರ್‌.ಅಧ್ಯಕ್ಷರು ಕೇರಳ ಪ್ರಾಂತ ಕನ್ನಡ  ಮಾಧ್ಯಮ ಅಧ್ಯಾಪಕರ ಸಂಘ,

ದುರದೃಷ್ಟಕರ ಇದು ದುರದೃಷ್ಟಕರ. 
ಶಿಕ್ಷಣ ಉಪನಿರ್ದೇಶಕರಿಂದ ಬಂದ ಆದೇಶಗಳನ್ನು ನಾವು ಜಾರಿಗೊಳಿಸಲೇ ಬೇಕಾಗಿದೆ. ಆದರೆ ಓರ್ವ ಕನ್ನಡಿಗನಾಗಿ ನಾನಿದನ್ನು ಖಂಡಿಸುತ್ತಿದ್ದು, ಈ ಬಗ್ಗೆ ಅಗತ್ಯದ ನಿರ್ದೇಶಗಳನ್ನು ಶಾಲಾ ರಕ್ಷಕ -ಶಿಕ್ಷಕ ಸಂಘಕ್ಕೆ ನೀಡಿರುವೆನು. ಅಲ್ಲದೆ ಶಿಕ್ಷಣ ಉಪನಿರ್ದೇಶಕರಿಗೂ ಕನ್ನಡ ಶಿಕ್ಷಕರ ನೇಮಕಾತಿಯ ಕಾನೂನಿನ ಬಗ್ಗೆ ತಿಳಿಸಿರುವೆನು.
– ಎನ್‌ ನಂದಿಕೇಶನ್‌
ವಿದ್ಯಾಧಿಕಾರಿ,ಕಾಸರಗೋಡು 

Advertisement

Udayavani is now on Telegram. Click here to join our channel and stay updated with the latest news.

Next