Advertisement

Malavoor : ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು

01:08 AM Sep 30, 2024 | Team Udayavani |

ಬಜಪೆ: ಮಳವೂರು ರೈಲ್ವೇ ಸೇತುವೆಯ ಬಳಿ ಫ‌ಲ್ಗುಣಿ ನದಿಯ ನೀರಿನಲ್ಲಿ ರವಿವಾರ ಸಂಜೆ 4ರ ವೇಳೆ ಈಜಾಡಲು ತೆರಳಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆ ಸಂಭವಿಸಿದೆ.

Advertisement

ಸ್ನೇಹಿತರಾದ ಮಂಗಳೂರು ನಗರದ ಕೋಡಿಕಲ್‌ನ ನಿವಾಸಿಗಳಾದ ಅರುಣ್‌ (19), ದೀಕ್ಷಿತ್‌ (20), ಕೊಟ್ಟಾರ ಚೌಕಿಯ ಸುಮಿತ್‌ (20) ಹಾಗೂ ಉರ್ವಸ್ಟೋರಿನ ಅನಿಶ್‌ (19) ಅವರು ಮಳವೂರು ರೈಲ್ವೇ ಸೇತುವೆಯ ಬಳಿ ಫ‌ಲ್ಗುಣಿ ನದಿಯಲ್ಲಿ ಈಜಾಡಲು ಹೋಗಿದ್ದರು. ಇವರಲ್ಲಿ ಕೊಟ್ಟಾರ ಚೌಕಿಯ ಸುಮಿತ್‌ (20) ಹಾಗೂ ಉರ್ವಸ್ಟೋರಿನ ಅನಿಶ್‌ (19) ನದಿ ನೀರಿನ ಸುಳಿಗೆ ಸಿಲುಕಿಕೊಂಡು ನೀರುಪಾಲಾಗಿದ್ದಾರೆ.

ಸುದ್ದಿ ತಿಳಿದು ಬಜಪೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದು, ನದಿಯ ನೀರಿನಲ್ಲಿ ಇಬ್ಬರ ಹುಡುಕಾಟವನ್ನು ಆರಂಭಿಸಿದರು. ಅಗ್ನಿಶಾಮಕದ ಬೆಳಕಿನ ವ್ಯವಸ್ಥೆಯೊಂದಿಗೆ ತಡರಾತ್ರಿಯವರೆಗೂ ಶೋಧ ಕಾರ್ಯ ಮುಂದುವರಿದಿತ್ತು. ಸ್ಥಳಕ್ಕೆ ಮುಳುಗು ತಜ್ಞರನ್ನು ಕೂಡ ಕರೆಸಿಕೊಳ್ಳಲಾಗಿದೆ. ಬಜಪೆ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಂದೀಪ್‌ ಜಿ.ಎಸ್‌. ಮತ್ತು ಸಿಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಇದ್ದಾರೆ. ಯುವಕರಿಬ್ಬರು ನೀರಿನಲ್ಲಿ ಮುಳುಗಿದ ಸುದ್ದಿ ಕೇಳಿ ಹಲವಾರು ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್‌ ಸುಮಿತ್‌ ಅವರು ಕೊಟ್ಟಾರ ಚೌಕಿಯ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದರು. ಇವರ ತಂದೆ ಕೆಲವು ಸಮಯದ ಹಿಂದೆ ಅನಾರೋಗ್ಯಕ್ಕೀಡಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ . ಸುಮಿತ್‌ ತಂಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅನಿಶ್‌ ಸೋಡಾ ಫಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

ರಜಾ ದಿನಗಳಲ್ಲಿ ಈಜಲು ಬರುವ ಯುವಕರು
ಮಳವೂರು ಡ್ಯಾಂ ಪರಿಸರದಲ್ಲಿ ರಜಾ ದಿನಗಳಲ್ಲಿ ಮಂಗಳೂರು ಸಹಿತ ವಿವಿಧ ಪ್ರದೇಶದ ಯುವಕರು ಈಜಲು ಬರುತ್ತಾರೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಸೆಳೆತ ಇರುವುದರಿಂದ ನೀರಿಗೆ ಇಳಿಯದಂತೆ ಸ್ಥಳೀಯರು ಎಚ್ಚರಿಸಿದರೂ ಯುವಕರು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೆಲವರು ರೈಲ್ವೇ ಸೇತುವೆಯ ಮೇಲೆ ಕುಳಿತುಕೊಂಡಿರುತ್ತಾರೆ. ಒಂದು ವೇಳೆ ಪೊಲೀಸರು ಅತ್ತ ತೆರಳಿದರೆ ಅವರು ನೀರಿಗೆ ಹಾರಿ ತಪ್ಪಿಸಿಕೊಳ್ಳುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next