Advertisement

ಅಂಗವೈಕಲ್ಯ ಮರೆತು ಆತ್ಮವಿಶ್ವಾಸದಿಂದ ಗೆದ್ದ ಮಾಲತಿ: ಕೇಳಲೇಬೇಕಾದ ಕನ್ನಡತಿಯ ಜೀವನದ ಯಶೋಗಾಥೆ

06:22 PM Sep 16, 2020 | Karthik A |

ಬದುಕು ತಿರುವುಗಳ ಕಂತೆ ಇದ್ದಂತೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇರಬೇಕಷ್ಟೇ.

Advertisement

ನಮ್ಮಲ್ಲಿರುವ ಕೊರತೆಗಳನ್ನು ಮರೆತು, ಸಮಸ್ಯೆಗಳೊಂದಿಗೆ ಬದುಕಿ ಸಾಧಿಸಿ ತೋರಿಸುವುದು ಜೀವನದ ಸಾರ್ಥಕತೆ.

ಇದಕ್ಕೆ ಉದಾಹರಣೆ ಎಂಬಂತೆ ಓರ್ವ ಹೆಣ್ಣು ಮಗಳು ತನ್ನ ಅಂಗಾಂಗ ವೈಕಲ್ಯವನ್ನು ಮೆಟ್ಟಿ ನಿಂತು ಸಾಧಿಸಿ ಬದುಕಿನಲ್ಲಿ ಸಾರ್ಥಕತೆ ಪಡೆದಿದ್ದಾರೆ.

ಅವರ ಸಾಧನೆಯನ್ನು ಮೈ ಕೈ ತುಂಬಿರುವ ವ್ಯಕ್ತಿಗಳೇ ಹೌಹಾರಿ..! ಇದ್ದರೆ ಇವರಂತೆ ಇರಬೇಕು ಎಂದುಕೊಂಡಿದ್ದಾರೆ. ಹಾಗಾದರೆ ಆ ಹೆಣ್ಮಗಳು ಬೇರೆಯಾರು ಅಲ್ಲ ಆಕೆಯೇ ಮಾಲತಿ ಕೃಷ್ಣಮೂರ್ತಿ. ಇವರ ಬದುಕು ನಿಜಕ್ಕೂ ಆದರ್ಶ. ಇವರ ಕಥೆ ಕೇಳಿದರೆ ಸಾಕು ನಮ್ಮಲ್ಲೆಲ್ಲೋ ಇರುವ ಕಿಡಿ ಬೆಂಕಿಯಂತೆ ಹಚ್ಚಿ ಬಡೆದೆಬ್ಬಿಸುತ್ತದೆ.

ಜುಲೈ 6, 1968ರಂದು ಬೆಂಗಳೂರಿನಲ್ಲಿ ಜನಿಸಿದ ಮಾಲತಿ ಅವರು ಒಂದು ವರ್ಷದ ಮಗುವಾಗಿದ್ದಾಗಲೇ ಜ್ವರ ಬಂದು ಅದರಿಂದ ಪಾರ್ಶ್ವವಾಯು ರೋಗಕ್ಕೆ ತುತ್ತಾಗುತ್ತಾರೆ. 2 ವರ್ಷಗಳ ನಿರಂತರ ಚಿಕಿತ್ಸೆಯ ಫ‌ಲವಾಗಿ ದೇಹದ ಮೇಲ್ಭಾಗವು ಸ್ವಲ್ಪ ಚೇತರಿಕೆ ಕಂಡಿತು.

Advertisement

ಸೇವೆಯ ಹಿರಿಮೆ
ಇವರು ಅಂಗವಿಕಲರಾಗಿದ್ದು ತನ್ನಂತೆ ಜೀವನ ನಡೆಸಲು ಸಾಧ್ಯವಿಲ್ಲದ ಆರ್ಥಿಕ ತೊಂದರೆಗೊಳಪಟ್ಟ ಇತರ ಪೊಲೀಯೊ ಪೀಡಿತರು ಮತ್ತು ಅಂಗವಿಕಲರಿಗೆ ಬದುಕಿನ ಆಸ್ತೆಯನ್ನು ಬೆಳೆಸುವ ಸಲುವಾಗಿ ಸ್ನೇಹಿತರೊಂದಿಗೆ ಜತೆಯಾಗಿ ಚಾರಿಟೆಬಲ್‌ ಟ್ರಸ್ಟ್‌ ಪ್ರಾರಂಭಿಸಿದರು. ಗ್ರಾಮೀಣ ಪ್ರದೇಶದ ಪೊಲೀಯೊ ಪೀಡಿತರನ್ನು ಕೇಂದ್ರಿಕರಿಸಿ ಅವರಿಗೆ ಸ್ಫೂರ್ತಿ ತುಂಬುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಗೆಳೆಯರೊಂದಿಗೆ ಆಟೋಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಿಲ್ಲವಾದಾಗ ಅದನ್ನು ಸಾಧಿಸಬೇಕೆಂಬ ಛಲ ಇವರಲ್ಲಿ ಉಂಟಾಯಿತು.

ಸಾಮಾನ್ಯರಂತೆ ಇರಲು ಇಚ್ಛಿಸಿದ ಇವರ ಉದ್ದೇಶವೇ ಈ ಸಾಧನೆಗೆ ಪ್ರೇರಣೆಯಂತೆ. ‘ನಾನು ಅಂಗವಿಕಲೆಯೆಂದು ಭಾವಿಸಲಾರೆ ಸಹಜವಾಗಿ ನಾನು ದೈಹಿಕವಾಗಿ ನಿಷ್ಕ್ರಿಯಳಾಗಿದ್ದೇನೆ ಅಷ್ಟೇ. ಆದರೆ ಅದು ನನ್ನ ದೇಹದ ಒಂದು ಭಾಗವಷ್ಟೇ ನನ್ನ ಆತ್ಮವಿಶ್ವಾಸಕ್ಕೆ ಎಂದಿಗೂ ಪಾರ್ಶ್ವವಾಯು ಸುಳಿಯಲಾರದು ಎನ್ನುತ್ತಾರೆ’ ಮಾಲತಿ. ಇದರಲ್ಲಿಯೇ ಆಕೆಯ ಆತ್ಮಸ್ಥೈರ್ಯವನ್ನು ನಾವು ಅರಿಯಬಹುದಾಗಿದೆ. ತನ್ನ ಕಾಲೇಜಿನ ಶೈಕ್ಷಣಿಕ ಕಲಿಕೆ ಅವಧಿಯಲ್ಲಿ ಮೆಲ್ಮಹಡಿ ಹತ್ತಬೇಕಾಗಿ ಬಂದಾಗ ಪ್ರಾಂಶುಪಾಲರ ಬಳಿ ತನ್ನ ಸಮಸ್ಯೆ ಹೇಳಿಕೊಂಡಾಗ ಸ್ಪರ್ಧಾತ್ಮಕ ಯುಗದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಂತೆ ನಾವಿರಬೇಕು ಅನ್ನುವ ಪ್ರಾಂಶುಪಾಲರ ಮಾತು ಮಾಲತಿಯವರಿಗೆ ನಿರ್ದಿಷ್ಟ ಗುರಿಯಡೆಗೆ ಗಮನಹರಿಸುವಂತೆ ಮಾಡಿದೆಯಂತೆ.

ಗಾಲಿ ಕುರ್ಚಿಯ ಸಹಾಯದಿಂದ 1988ರಲ್ಲಿ ಮೊದಲ ಬಾರಿ ಪ್ಯಾರಾ ಒಲಂಪಿಕ್‌ನಲ್ಲಿ ಇವರು ಭಾಗವಹಿಸಿ 100, 200ಮೀ ಓಟ, ಚಕ್ರ ಎಸೆತ, ಗುಂಡೆಸೆತ, ಈಟಿ ಹೀಗೆ ನಾನಾ ಕ್ರೀಡೆಯಲ್ಲಿ ಸಕ್ರಿಯರಾಗುವ ಜತೆ ಬಹುಮಾನವನ್ನು ಗೆದ್ದರು. ಕ್ರೀಡಾ ಸಾಧನೆಯ ಹಿರಿಮೆಯ ಜತೆ ಬ್ಯಾಂಕ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ ಹಿರಿಮೆ ಮಾಲತಿಯವರದ್ದು.

ಪ್ರಶಸ್ತಿ
ಇದುವರೆಗೂ 428 ಪ್ರಶಸ್ತಿಯನ್ನು ಪಡೆದಿದ್ದಾರೆ. ಬ್ಯಾಂಕಾಕ್‌, ದಕ್ಷಿಣ ಕೊರಿಯಾ, ಬೀಜಿಂಗ್‌ ನಡೆದ ಅಂತಾರಾಷ್ಟ್ರೀಯ ಪ್ಯಾರಾಒಲಂಪಿಕ್ಸ್‌ನಲ್ಲಿ, 1989ರಂದು 200ಮೀ ಶಾಟ್ಫುಟ್‌‌, ಜಾವಲಿನ್‌ ಮತ್ತು ಡಿಸ್ಕಸ್‌ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯ ಮತ್ತು ಡೆನ್ಮಾರ್ಕ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್‌ ಹಾಗೂ ಬೆಲ್ಜಿಯಂ, ಕೊಲ್ಲಾಪುರಂ ಮತ್ತು ಇಂಗ್ಲೆಂಡಿ‌ನ‌ಲ್ಲಿ ನಡೆದ ಓಪನ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

1995ರಲ್ಲಿ ರಾಜ್ಯ ಸರಕಾರದ ಕೆ.ಕೆ. ಬಿರ್ಲಾ ಪ್ರಶಸ್ತಿ, ಏಕಲವ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. 1999ರಲ್ಲಿ ಅಮೆರಿಕನ್‌ ಬಯೋಗ್ರಾಫಿಕಲ್‌ ಇನ್‌ಸ್ಟಿಟ್ಯೂಟ್‌ ನಿಂದ ವರ್ಷದ ಸಾಧಕ ಮಹಿಳೆ(ವುಮನ್‌ ಆಫ್ ದಿ ಇಯರ್‌) ಎಂಬ ಪ್ರಶಸ್ತಿ, ಬ್ರಿಟನ್‌ ನಿಂದ ಅಂತಾರಾಷ್ಟ್ರೀಯ ಮಹಿಳೆ ಎಂಬ ಪ್ರಶಸ್ತಿ ಪಡೆದು ಭಾರತದ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಇವರ ಈ ಸಾಧನೆಗೆ ಜೀವನ ಚರಿತ್ರೆಯ “ಎ ಡಿಫ‌ರೆಂಟ್‌ ಸ್ಪಿರಿಟ್‌‘ ಬಿಡುಗಡೆಯಾಗಿದ್ದು ಕ್ರೀಡೆಯೊಂದಿಗೆ ಜೀವನವನ್ನು ಹೇಗೆ ಕ್ರಿಯಾಶೀಲ ಮತ್ತು ವಿಭಿನ್ನವಾಗಿಸಲು ಸಾಧ್ಯವಿದೆ ಎಂಬುದರ ಕುರಿತು ಅಲ್ಲಿ ತಿಳಿಸಲಾಗಿದೆ.

 ರಾಧಿಕಾ ಕುಂದಾಪುರ 

 

Advertisement

Udayavani is now on Telegram. Click here to join our channel and stay updated with the latest news.

Next