ಕನ್ನಡ ಚಿತ್ರರಂಗದ ಆ್ಯಕ್ಷನ್ ಕ್ವೀನ್ ಖ್ಯಾತಿಯ ನಟಿ ಮಾಲಾಶ್ರೀ ಈಗ ಮತ್ತೂಂದು ಆ್ಯಕ್ಷನ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಅಂದಹಾಗೆ, ಮಾಲಾಶ್ರೀ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಲುಕ್‌ನಲ್ಲಿ ಅಭಿನಯಿಸಿರುವ ಈ ಸಿನಿಮಾಕ್ಕೆ “ಮಾರಕಾಸ್ತ್ರ’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ “ಮಾರಕಾಸ್ತ್ರ’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಯಿತು.
ಟೀಸರ್ ಬಿಡುಗಡೆ ವೇಳೆ ಮಾತನಾಡಿದ ಮಾಲಾಶ್ರೀ, “ನಿರ್ದೇಶಕ ಗುರುಮೂರ್ತಿ ಸುನಾಮಿ ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೇ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆ ನಂತರ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ನಾನು ಆ್ಯಕ್ಷನ್ ಕ್ವೀನ್ ಎಂದು ಕರೆಸಿಕೊಳ್ಳಲು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಪ್ರಮುಖ ಕಾರಣ. ಅವರ ಜೊತೆಗೆ ಈ ಸಿನಿಮಾದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ. “ಮಾರಕಾಸ್ತ್ರ’ ಸಿನಿಮಾದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ’, “ಶಕ್ತಿ’ ಮುಂತಾದ ಸಿನಿಮಾಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಸುನಾಮಿ ಗುರುಮೂರ್ತಿ, “ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ಮಾಲಾಶ್ರೀ ಅವರಂಥ ದೊಡ್ಡ ನಟಿಗೆ ಆ್ಯಕ್ಷನ್-ಕಟ್ ಹೇಳುತ್ತೇನೆ ಅಂದುಕೊಂಡಿರಲಿಲ್ಲ. “ಮಾರಕಾಸ್ತ್ರ’ ಒಂದು ಕೌಟುಂಬಿಕ ಚಿತ್ರ. ಇದರಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡಿದರು.
“ಮಾರಕಾಸ್ತ್ರ’ ಚಿತ್ರದ ಕಥೆ ಚೆನ್ನಾಗಿದೆ. ಚಿತ್ರದ ಹಾಡು ಹೇಳುವುದಕ್ಕೆ ಹೋದ ನಾನು ನಿರ್ಮಾಪಕನಾದೆ. ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ. ನನಗೆ ನನ್ನ ದೇಶದ ಮೇಲೆ ಅಭಿಮಾನ ಹೆಚ್ಚು. ಹಾಗಾಗಿ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಹಾಡನ್ನು ಬಿಡುಗಡೆ ಮಾಡುತ್ತೇವೆ’ ಎಂದರು ನಿರ್ಮಾಪಕ ನಟರಾಜ್.
“ಈ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಹರ್ಷಿಕಾ ಪೂಣತ್ಛ ಹೇಳಿದರು. ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಆನಂದ್ ಆರ್ಯ, ಭರತ್ ಸಿಂಗ್, ಉಗ್ರಂ ಮಂಜು, ನಿರ್ಮಾಪಕಿ ಕೋಮಲ ನಟರಾಜ್, ಕ್ರಿಯೇಟಿವ್ ಹೆಡ್ ಧನಕುಮಾರ್, ಕಾರ್ಯಕಾರಿ ನಿರ್ಮಾಪಕ ಮಂಜುನಾಥ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಬಾಬು ಮುಂತಾದವರು “ಮಾರಕಾಸ್ತ್ರ’ ಚಿತ್ರದ ಕುರಿತು ಮಾತನಾಡಿದರು. ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.