ಬೆಳಗಾವಿ: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಇಲ್ಲದಿರುವುದರಿಂದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮಲೇರಿಯಾ ನಿರ್ಮೂಲನೆ ಚೌಕಟ್ಟಿನಲ್ಲಿ ಪ್ರಶಂಸಾ ಪತ್ರ ನೀಡಿದೆ. ಇದೇ ನಿಟ್ಟಿನಲ್ಲಿ 2025 ರೊಳಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಆಗದಂತೆ ಮನೆ ಮನೆಗೆ ಭೇಟಿ ಮಾಡಿ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಮ್.ಎಸ್ .ಪಲ್ಲೇದ ಹೇಳಿದರು.
ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಹಾಗೂ ಕೆ ಎಲ್ ಇ ಚಾರಿಟೇಬಲ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ನಗರದ ಶಹಾಪುರ ನಾಥ ಪೈ ವೃತ್ತದಿಂದ ಯಳ್ಳೂರ ಕೆ ಎಲ್ ಇ ಚಾರಿಟೇಬಲ್ ಆಸ್ಪತ್ರೆಯವರೆಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಲೇರಿಯಾವನ್ನು ನಿಯಂತ್ರಿಸುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನದ ಬಗ್ಗೆ ಜಾಗೃತಿ ಮೂಡಿಸಲು ಏ.25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಲೇರಿಯಾವು ಮಾರಣಾಂತಿಕ ಕಾಯಿಲೆಯಾಗಿದ್ದು ಅದು ಪ್ಲಾಸ್ಮೋಡಿಯಮ್ ಪರಾವಲಂಬಿಯಿಂದ ಉಂಟಾಗುತ್ತದೆ. ಮಲೇರಿಯಾ ತಡೆಗಟ್ಟುವಿಕೆ ಬಗ್ಗೆ ಕಾಳಜಿ ವಹಿಸಲು ಸಮುದಾಯಗಳಿಗೆ ಅಧಿಕಾರ ನೀಡುವ ಉದ್ದೇಶದೊಂದಿಗೆ ಇದು ತಳಮಟ್ಟದ ಅಭಿಯಾನವಾಗಿದೆ ಎಂದರು.
ಕೆಎಲ್‌ಇ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ| ಎಸ್.ಸಿ.ಧಾರವಾಡ ಮಾತನಾಡಿ, ಮಲೇರಿಯಾ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯ ಎಂದರು.
ಜಾಗೃತಿ ಜಾಥಾದಲ್ಲಿ ವಿವಿಧ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.