Advertisement

ಜಿಲ್ಲೆಯ 399 ಹಳ್ಳಿಗಳಿಗೂ ಮಲಪ್ರಭೆ

11:21 AM Feb 09, 2020 | Suhan S |

ಧಾರವಾಡ: ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯಲು ಮಲಪ್ರಭಾ ನದಿ ನೀರನ್ನು ಸರಬರಾಜು ಮಾಡಲು 1,300 ಕೋಟಿ ಅಂದಾಜು ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ಮಂತ್ರಿ ಮಂಡಲ ಸಭೆಯಲ್ಲಿ ಅನುಮೋದಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಹು-ಧಾ ಮಹಾನಗರ ಪಾಲಿಕೆ ಆಶ್ರಯದಲ್ಲಿ ಅಮ್ಮಿನಬಾವಿಯಲ್ಲಿ ನಿರ್ಮಿಸಿರುವ 40 ಎಂಎಲ್‌ಡಿ ಸಾಮರ್ಥ್ಯದ ನೂತನ ಜಲಶುದ್ಧೀಕರಣ ಘಟಕದ ಉದ್ಘಾಟನೆ ಹಾಗೂ ಯಂತ್ರಾಗಾರದಲ್ಲಿ ಅಳವಡಿಸಿರುವ ನೂತನ ಯಂತ್ರೋಪಕರಣಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಹು-ಧಾ ಮಹಾನಗರ ಪಾಲಿಕೆಯ ಠೇವಣಿ ಹಣದಲ್ಲಿನ 26 ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ಈ ನೂತನ ಜಲಶುದ್ಧೀಕರಣ ಘಟಕ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಮಹಾನಗರಕ್ಕೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲು ಅನುಕೂಲವಾಗಲಿದೆ ಎಂದರು. ಮಹಾನಗರದ ಒಟ್ಟು 64 ವಾರ್ಡ್‌ಗಳ ಪೈಕಿ ಈಗಾಗಲೇ 11 ವಾರ್ಡ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 15 ವಾರ್ಡ್‌ಗಳ ಭಾಗಶಃ ಪ್ರದೇಶಕ್ಕೆ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲ ವಾರ್ಡ್ ಗಳಿಗೂ ನಿರಂತರ ನೀರು ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ನಿರ್ವಹಿಸುವ ಗುತ್ತಿಗೆ ಕಂಪನಿಯ ಅನುಮೋದನೆಗಾಗಿ ಆರ್ಥಿಕ ನೆರವು ನೀಡಲಿರುವ ವಿಶ್ವ ಬ್ಯಾಂಕ್‌ಗೆ ಸಲ್ಲಿಸಲಾಗಿದೆ. ಸದ್ಯದಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು.

ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿದಿನಕ್ಕೆ ಸುಮಾರು 200 ಎಂಎಲ್‌ಡಿ ನೀರಿನ ಅಗತ್ಯವಿದೆ. ಹುಬ್ಬಳ್ಳಿ ಮಹಾನಗರಕ್ಕೆ ನೀರಸಾಗರ ಜಲಾಶಯದಿಂದ ಸುಮಾರು 40 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿತ್ತು. ಆದರೆ ಜಲಾಶಯ ಬತ್ತಿದ್ದರಿಂದ ಮಲಪ್ರಭಾ ಜಲಾಶಯದಿಂದ 160 ಎಂಎಲ್‌ಡಿ ನೀರಿನ ಮೇಲೆ ಅವಳಿನಗರಕ್ಕೆ ನೀರು ಪೂರೈಸಿದ್ದರಿಂದ ಬೇಸಿಗೆ ಕಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕಾಯಿತು. ಈ ಸಮಸ್ಯೆ ಪರಿಹರಿಸಲು ಸುಮಾರು 26 ಕೋಟಿ ಮೊತ್ತದಲ್ಲಿ ಮಲಪ್ರಭಾ ಜಲಾಶಯದಿಂದ ನೀರು ತರಲು ಸವದತ್ತಿ ಜಾಕ್ವೆಲ್‌ ಹಾಗೂ ಅಮ್ಮಿನಬಾವಿ ಪಂಪ್‌ಹೌಸ್‌ ಹೊಸ ಯಂತ್ರೋಪಕರಣ, ಪಂಪ್‌ಸೆಟ್‌ಗಳ ಅಳವಡಿಕೆ ಹಾಗೂ ಅಮ್ಮಿನಭಾವಿಯಲ್ಲಿ 40 ಎಂಎಲ್‌ಡಿ ಸಾಮರ್ಥ್ಯದ ಹೊಸ ಜಲ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ.

ಈಗ ಮಲಪ್ರಭಾ ಜಲಾಶಯದಿಂದ 200 ಎಂಲ್‌ಡಿ ಹಾಗೂ ನೀರಸಾಗರ ಜಲಾಶಯದಿಂದ 40 ಎಂಎಲ್‌ಡಿ ಸೇರಿ ಒಟ್ಟು 240 ಎಂಎಲ್‌ಡಿ ನೀರು ಸರಬರಾಜು ಆಗುತ್ತದೆ. ಇದರಿಂದ ಅವಳಿನಗರದ ಜನತೆಗೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರನ್ನು ನಿರಾತಂಕವಾಗಿ ಪೂರೈಸಲಾಗುತ್ತದೆ ಎಂದು ತಿಳಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ಎಲ್ಲ ಹಳ್ಳಿಗೂ ಮಲಪ್ರಭೆ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಶಾಸಕ ಅರವಿಂದ ಬೆಲ್ಲದ, ಡಿಸಿ ದೀಪಾ ಚೋಳನ್‌, ಮಾಜಿ ಶಾಸಕಿ ಸೀಮಾ ಮಸೂತಿ, ಕಾರ್ಯಪಾಲಕ ಅಭಿಯಂತ ಅಶೋಕ ಮಾಡ್ಯಾಳ, ಸಹಾಯಕ ಕಾರ್ಯ ಅಭಿಯಂತ ವೆಂಕಟರಾವ್‌, ಮಲ್ಲಿಕಾರ್ಜುನ ಹಳೆಮನಿ ಇನ್ನಿತರರಿದ್ದರು.

ಜಲಮಂಡಳಿ ನಿವೃತ್ತ ಮುಖ್ಯ ಅಭಿಯಂತ ಡಿ.ಎಲ್‌. ರಾಜು, ಕಾಮಗಾರಿ ಗುತ್ತಿಗೆ ಪಡೆದಿದ್ದ ಹೈದರಾಬಾದ್‌ ಇನ್‌ಫ್ರಾಟೆಕ್‌ ಸಂಸ್ಥೆಯ ಪ್ರತಿನಿಧಿ ಹಾಗೂ ಪುಣೆ ಮೂಲದ ಮೆ| ಎಸ್‌.ಬಿ.ಎಂ. ಪ್ರಾಜೆಕ್ಟ್ ಸಂಸ್ಥೆಯ ಪ್ರತಿನಿಧಿಯನ್ನು ಗೌರವಿಸಲಾಯಿತು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಸ್ವಾಗತಿಸಿದರು. ಮುಖ್ಯ ಅಭಿಯಂತ ಎ.ಸಿ. ಚಾಮರಾಜೇಗೌಡ ಪ್ರಾಸ್ತಾವಿಕ ಮಾತನಾಡಿದರು. ಗೌರಿ ನಿರೂಪಿಸಿದರು. ಜಗದೀಶ ಬಳಬಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next